ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಶವ

0
82

ಉಡುಪಿ : ಇಂದ್ರಾಳಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಗುರುವಾರ ತಡರಾತ್ರಿ ಪತ್ತೆಯಾಗಿದೆ.

ಮೃತಪಟ್ಟ ವ್ಯಕ್ತಿ ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಚಕ್ರದಡಿಗೆ ಸಿಲುಕಿರಬಹುದೇ ಅಥವಾ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ಸಂಭವಿಸಿರಬಹುದೆಂದು ತಿಳಿದುಬಂದಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಸ್ಥಳಕ್ಕೆ ರೈಲ್ವೆ ಆರ್‌ಪಿಎಫ್ ಅಧಿಕಾರಿಗಳು ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಎಎಸ್‌ಐ ವಿವೇಕಾನಂದ ಮತ್ತು ಮುಖ್ಯ ಆರಕ್ಷಕ ಥೋಮ್ಸನ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು.

ಬಳಿಕ ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು.

ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರ ವಾರಸುದಾರರು ಅಥವಾ ಪರಿಚಯಸ್ಥರು ಮಣಿಪಾಲ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.