ನೆಲ್ಯಾಡಿ : ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಸಿಡಿಲು-ಗುಡುಗಿನ ಆರ್ಭಟಕ್ಕೆ ನೆಲ್ಯಾಡಿ ಸಮೀಪದ ಮೊರಂಕಳದ ನಿವಾಸಿಯೊಬ್ಬರ ಮನೆಗೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದೆ.
ಮೊರಂಕಳದ ತೆಕ್ಕಿಲಕಟ್ಟಿಲ್ ನಿವಾಸಿ ಜೋಸ್ ಎ.ಪಿ. ಅವರ ಮನೆಗೆ ನವೆಂಬರ್ 5ರಂದು ಸಂಜೆ ಸುಮಾರು 6ರಿಂದ 6.30ರ ವೇಳೆಗೆ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಮನೆಯ ವಿದ್ಯುತ್ ವೈರಿಂಗ್ ಸಂಪೂರ್ಣ ಹಾನಿಗೊಳಗಾಗಿದ್ದು, ಟಿವಿ ಸೇರಿದಂತೆ ಹಲವು ಗೃಹೋಪಯೋಗಿ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಮನೆಯಲ್ಲಿದ್ದ ಇತರ ವಸ್ತುಗಳಿಗೂ ಹಾನಿಯಾಗಿದೆ.
ಈ ಘಟನೆಯಿಂದ ಸುಮಾರು ₹1.5 ಲಕ್ಷದಿಂದ ₹2 ಲಕ್ಷದವರೆಗೆ ಆರ್ಥಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಪ್ರಾರ್ಥನೆಯಲ್ಲಿ ನಿರತರಾಗಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರು!
ಸಿಡಿಲು ಬಡಿದ ಸಂದರ್ಭದಲ್ಲಿ ಮನೆಯಲ್ಲಿ ನಾಲ್ವರು ಸದಸ್ಯರಿದ್ದರು. ಅವರೆಲ್ಲರೂ ಮನೆಯ ಕೋಣೆಯೊಂದರಲ್ಲಿ ಕುಳಿತು ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಇದೇ ವೇಳೆ ಏಕಾಏಕಿ ಸಿಡಿಲು ಬಡಿದಿದ್ದು, ಮನೆಯೊಳಗೆ ಭಾರೀ ಶಬ್ದದೊಂದಿಗೆ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಮನೆಯಲ್ಲಿದ್ದ ನಾಲ್ವರು ಸದಸ್ಯರಿಗೂ ಯಾವುದೇ ಗಾಯಗಳಾಗಿಲ್ಲ. ಯಾವುದೇ ಪ್ರಾಣಾಪಾಯ ಸಂಭವಿಸದೆ ಎಲ್ಲರೂ ಸುರಕ್ಷಿತವಾಗಿದ್ದಾರೆ.
ಮನೆಯ ವಿದ್ಯುತ್ ಉಪಕರಣಗಳು ಹಾಗೂ ಇತರ ವಸ್ತುಗಳಿಗೆ ಭಾರೀ ಹಾನಿಯಾಗಿರುವುದರಿಂದ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮಳೆಗಾಲದಲ್ಲಿ ಸಿಡಿಲು-ಗುಡುಗಿನ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಈ ಘಟನೆ ಎಚ್ಚರಿಕೆ ನೀಡಿದೆ.

