ಭಾವಗೀತೆಗಳ ಗಾಯನ, ಕವಿಗೋಷ್ಠಿ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆ
ಕಾಸರಗೋಡು: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸಾಹಿತ್ಯೋತ್ಸವ, ಭಾವಗೀತೆಗಳ ಗಾಯನ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನದ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಇದರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಡಿನಾಡು ಕಾಸರಗೋಡಿನಲ್ಲಿ ನಡೆದ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಪತ್ರಕರ್ತ ಶಿವಯೋಗಿ ಮಹಾನುಭಾವಿ ಮಠ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕೇರಳ-ಕರ್ನಾಟಕ ಭವನಕ್ಕೆ ಕರ್ನಾಟಕ ಸರಕಾರವು ಮುಂದಿನ ಬಜೆಟ್ನಲ್ಲಿ 10 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.
2026ರ ನವೆಂಬರ್ 28 ಮತ್ತು 29ರಂದು ನಡೆಯಲಿರುವ ಕೇರಳ ರಾಜ್ಯದ 8ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವಕ್ಕೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳ ನಿಯೋಗವು ಎರಡು ದಿನಗಳ ಕಾಲ ಭಾಗವಹಿಸಲಿದೆ. ಈ ಮೂಲಕ ಕನ್ನಡ ಸಮ್ಮೇಳನಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಲಾಗುವುದು ಎಂದು ತಿಳಿಸಿದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಪ್ರಕಾಶನದ ಪ್ರಕಾಶಕ, ಲೇಖಕ ಹಾಗೂ ಪತ್ರಕರ್ತ ಸಿರಿಗೇರಿ ಯರಿಸ್ವಾಮಿ ಬೆಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬರುವ ಕನ್ನಡ ಸಮ್ಮೇಳನಕ್ಕೆ ಇಂದಿನಿಂದಲೇ ಪತ್ರಿಕೆ ಹಾಗೂ ಮಾಧ್ಯಮಗಳ ಮೂಲಕ ಪ್ರಚಾರ ಕಾರ್ಯ ಆರಂಭಿಸಲಾಗುವುದು ಎಂದರು.
ಪತ್ರಕರ್ತ ಶಿವಯೋಗಿ ಮಹಾನುಭಾವಿ ಮಠ ಅವರು ಕರ್ನಾಟಕದ ಎಲ್ಲ ಜಿಲ್ಲೆಗಳ ಪತ್ರಿಕಾ ಸಂಪಾದಕರ ಸಂಘಟನೆಗಳ ಮೂಲಕ ಸಮ್ಮೇಳನಕ್ಕೆ ಪ್ರಚಾರ ನೀಡುವ ಕುರಿತು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಉಪನ್ಯಾಸಕಿ ಪವಿತ್ರಾ ಕಾಮತ್ ಮಂಗಳೂರು, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ., ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸುಭಾಷ್ ಪೆರ್ಲ, ವೆಂಕಟ್ ಭಟ್ ಎಡನೀರು, ಜಯಾನಂದ ಕುಮಾರ್ ಕಾಸರಗೋಡು, ಕೆ.ಎನ್. ವೆಂಕಟ್ರಮಣ ಹೊಳ್ಳ, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಪ್ರಧಾನ ಸಂಚಾಲಕ ಉನೈಸ್ ಪೆರಾಜೆ ಸುಳ್ಯ, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಕೆ. ಗುರುಪ್ರಸಾದ್ ಕೋಟೆಕಣಿ, ಮಾಜಿ ಕೌನ್ಸಿಲರ್ ಶಂಕರ್ ಕೆ. ಜೆ.ಪಿ. ನಗರ, ಗುರುರಾಜ ಕಾಸರಗೋಡು, ಜೆ.ಪಿ. ಮಣಿಯಂಪಾರೆ ಹಾಗೂ ರವೀಂದ್ರ ಕುತ್ತಿಕೋಲು ಉಪಸ್ಥಿತರಿದ್ದರು.
ಭಾವಗೀತೆಗಳ ಗಾಯನ ಸಂಭ್ರಮ
ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಭಾವಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ವಸಂತ ಬಾರಡ್ಕ, ದಿವಾಕರ ಪಿ. ಕಾಸರಗೋಡು, ಕಾವ್ಯ ಕುಶಲಕುಮಾರ್ ಕನ್ನಡ ಗ್ರಾಮ, ಗ್ರೀಷ್ಮ ಜಯರಾಮ ಕನ್ನಡ ಗ್ರಾಮ, ಜೆ.ಪಿ. ಮಣಿಯಂಪಾರೆ, ಪವಿತ್ರ ಜೆ.ಪಿ. ಮಣಿಯಂಪಾರೆ ಹಾಗೂ ಶ್ರೀ ದುರ್ಗಾ ಮೆಲೋಡಿಸ್ ಮಣಿಯಂಪಾರೆ ತಂಡ ಮತ್ತು ಗುರುರಾಜ ಕಾಸರಗೋಡು ಅವರ ಸ್ವರಗಾನ ಸಂಗೀತ ಬಳಗ ಪಾಲ್ಗೊಂಡು ಗೀತಸಂಭ್ರಮಕ್ಕೆ ಮೆರುಗು ನೀಡಿದರು.
ಕವಿಗೋಷ್ಠಿಯಲ್ಲಿ ಕವಿಗಳ ಕವನ ವಾಚನ
ಜನ್ಮಶತಮಾನೋತ್ಸವದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ, ಲೇಖಕ ಹಾಗೂ ಕವಿ ಎ.ಬಿ. ಶಿವರಾಜ್ ಬೆಂಗಳೂರು ವಹಿಸಿದ್ದರು.
ಕವಿಗಳಾದ ದೇವರಾಜ್ ಆಚಾರ್ಯ ಸೂರಂಬೈಲು, ದೀಕ್ಷಾ ಪಾಂಡಿಗಾಯ, ಗ್ರೀಷ್ಮ ಬಳ್ಳ, ಪ್ರಮೀಳಾ ಚುಳ್ಳಿಕಾನ, ಸುಶೀಲಾ ಪದ್ಯಾಣ, ಜೋಷ್ನಾ ಕಡೆಂದೇಲು, ಸುಮನ ಕರಿಂಬಿಲ, ಅವನಿ, ವಿಜಯಕಾನ, ತೇಜಸ್ವಿನಿ ಮನೀಶ್ ಪುಚ್ಚೆಕಾಡು, ಸುಂದರ ಭಟ್ಟ ಕಾನ, ಶಶಿಕಲಾ ಟೀಚರ್ ಕುಂಬಳೆ, ಬಾಲಕೃಷ್ಣ ನಾಯ್ಕ ಎಳ್ಕಾನ, ನಿರ್ಮಲಾ ಸೇಸಪ್ಪ ಖಂಡಿಗೆ, ಸುಮಿತ್ರ ಎರ್ಪಕಟ್ಟೆ, ಚಿತ್ರಕಲಾ ದೇವರಾಜ್ ಸೂರಂಬೈಲು, ದರ್ಶೀನ್ ಚಿರಾಲ್ ಡಿ. ಆಚಾರ್ಯ, ನೀತಿಕಾ ಚೌಕಿ, ಮಲ್ಲಿಕಾ ರೆಂಜತಮೂಲೆ, ನಿವೇದಿತ ವಳಮಲೆ ಬದಿಯಡ್ಕ, ಕೃಪೇಶ್ ಕಲ್ಲಕಟ್ಟ, ರಾಧಾಕೃಷ್ಣ ಕುರುಮುಜ್ಜಿ ಹಾಗೂ ಶ್ರುತಿ ಮೀಪುಗುರಿ ಕವನ ವಾಚನ ಮಾಡಿದರು.
ವೆಂಕಟ್ ಭಟ್ ಎಡನೀರು, ಸುಶೀಲಾ ಕೆ. ಪದ್ಯಾಣ, ಸುಭಾಷ್ ಪೆರ್ಲ, ಕಾವ್ಯ ಕುಶಲ, ಉದಯ ಕುಮಾರ್ ಕೆ., ಶಶಿಕುಮಾರ್ ಕೂಡ್ಲು ಹಾಗೂ ಕುಶಲ ಕುಮಾರ್ ಕೆ. ಕಾರ್ಯಕ್ರಮ ಸಂಯೋಜಿಸಿದರು.
ರಾಜ್ಯಮಟ್ಟದ ಕವಿಗೋಷ್ಠಿಗೆ ಅವಕಾಶ
2026ರ ನವೆಂಬರ್ 28 ಮತ್ತು 29ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿರುವ ಕೇರಳ ರಾಜ್ಯದ 8ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಅತ್ಯುತ್ತಮವಾಗಿ ಕವನ ವಾಚನ ಮಾಡುವ ಕವಿಗಳಿಗೆ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

