ಮರೋಳಿ ವಾರ್ಡ್‌ನಲ್ಲಿ ₹6 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ತ್ವರಿತ ಪೂರ್ಣಗೊಳಿಸಲು ಐವನ್ ಡಿ’ಸೋಜಾ ಸೂಚನೆ

0
10

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 37ನೇ ಮರೋಳಿ ವಾರ್ಡ್‌ನಲ್ಲಿ ಸುಮಾರು ₹6 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಅವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಮಹಾತ್ಮ ಗಾಂಧಿ ವಿಕಾಸ ಯೋಜನೆಯ 2ನೇ ಹಂತದಡಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಹದಗೆಟ್ಟಿರುವ ಪ್ರಮುಖ ರಸ್ತೆಗಳು ಹಾಗೂ ದೇವಸ್ಥಾನ ಮತ್ತು ಚರ್ಚ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾ ಅವರು, ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಮೂಲಕ ರಾಜ್ಯಾದ್ಯಂತ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ ನಗರದ ರಸ್ತೆ ಅಭಿವೃದ್ಧಿಗಾಗಿ ಸುಮಾರು ₹400 ಕೋಟಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗಳು ಹಂತ ಹಂತವಾಗಿ ಆರಂಭವಾಗಲಿವೆ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ವಿಕಾಸ ಯೋಜನೆಯಡಿ ಈಗಾಗಲೇ ವಿವಿಧ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಬಾಕಿ ಉಳಿದಿರುವ ಕಾಮಗಾರಿಗಳಿಗೂ ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳು ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಅವಧಿಯಲ್ಲಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಕಾರ್ಪೊರೇಟರ್‌ಗಳಾದ ಕೇಶವ ಮರೋಳಿ, ನವೀನ್ ಡಿ’ಸೋಜಾ, ಬಜೋಡಿಯ ಇನ್ಫೆಂಟ್ ಮೇರಿ ಚರ್ಚ್‌ನ ಧರ್ಮಗುರು ರೆವರೆಂಡ್ ಫಾದರ್ ಪ್ರಕಾಶ್ ಡಿ’ಕುನ್ಹಾ, ವಾರ್ಡ್ ಅಧ್ಯಕ್ಷ ಗಂಗಾಧರ್ ಪೂಜಾರಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮರೋಳಿಯ ಹಿತೈಷಿಗಳು ಉಪಸ್ಥಿತರಿದ್ದರು.