ದೀಪಾವಳಿ ಸಂಭ್ರಮದಲ್ಲಿ ಅವಘಡ : ಪಟಾಕಿ ಸ್ಫೋಟಕ್ಕೆ ಯುವಕನ ಕಾಲಿಗೆ ಗಂಭೀರ ಗಾಯ

0
49

ಬೆಳ್ತಂಗಡಿ : ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಸಿಡಿಸುವಾಗ ಸಂಭವಿಸಿದ ಅಚಾತುರ್ಯದಿಂದ ಯುವಕನೊಬ್ಬನ ಬಲಗಾಲಿಗೆ ಗಂಭೀರ ಗಾಯವಾದ ಘಟನೆ ಬೆಳ್ತಂಗಡಿ ತಾಲೂಕಿನ ಕೊಯೂರು ಗ್ರಾಮದ ಮಲೆಬೆಟ್ಟು ಸಮೀಪ ನಡೆದಿದೆ.

ಕೊಯೂರು ಗ್ರಾಮದ ಮಲೆಬೆಟ್ಟು ಬಳಿಯ ಪೊರ್ನ್ನಂಡ ನಿವಾಸಿ ಕೃಷ್ಣಪ್ಪ ಗೌಡ ಅವರ ಪುತ್ರ ಲಿಕೇಶ್ ಗೌಡ (20) ಗಾಯಗೊಂಡ ಯುವಕ.

ಮನೆಯ ಅಂಗಳದಲ್ಲಿ ಮೂಲೆ ಪಟಾಕಿ ಸಿಡಿಸುತ್ತಿದ್ದ ಸಂದರ್ಭದಲ್ಲಿ ಮನೆಯವರು ಒಳಗಿನಿಂದ ಹೊರಬಂದಿದ್ದಾರೆ. ಇದನ್ನು ಗಮನಿಸಿದ ಲಿಕೇಶ್ ಗೌಡ ತಕ್ಷಣ ಪಟಾಕಿಯಿಂದ ರಕ್ಷಿಸಿಕೊಳ್ಳುವ ಉದ್ದೇಶದಿಂದ ಅದರ ಮೇಲೆ ಬಲಗಾಲನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಈ ವೇಳೆ ಪಟಾಕಿ ಏಕಾಏಕಿ ಸ್ಫೋಟಗೊಂಡ ಪರಿಣಾಮ ಅವರ ಬಲಗಾಲಿಗೆ ಗಂಭೀರ ಗಾಯವಾಗಿದೆ.

ಘಟನೆಯ ತಕ್ಷಣ ಮನೆಯವರು ಹಾಗೂ ಸ್ನೇಹಿತರು ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯದ ತೀವ್ರತೆಯನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸುವುದು ಹಾಗೂ ಸಿಡಿಯದೆ ಉಳಿದ ಪಟಾಕಿಗಳನ್ನು ಮುಟ್ಟದಿರುವುದು ಅತ್ಯಂತ ಅಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.