ಮಂಗಳೂರು: ಯುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವ ಹಾಗೂ ಚಾರ್ಟರ್ಡ್ ಅಕೌಂಟೆನ್ಸಿ (ಸಿ.ಎ.) ಪರೀಕ್ಷೆಗಳಿಗೆ ಸಮರ್ಥವಾಗಿ ಸಿದ್ಧಗೊಳಿಸುವ ಉದ್ದೇಶದಿಂದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಒಂಬತ್ತನೇ ಆವೃತ್ತಿಯ ‘ಸಿ.ಎ. ಪವರ್-25’ ಸಿ.ಎ. ಇಂಟರ್ ಸನಿವಾಸ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನವೆಂಬರ್ 6ರಂದು ನಡೆಯಿತು.
20 ದಿನಗಳ ಕಾಲ ನಡೆದ ಈ ಉಚಿತ ಸನಿವಾಸ ತರಬೇತಿ ಶಿಬಿರದ ಆರಂಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ದಿವಂಗತ ಬಸ್ತಿ ವಾಮನ್ ಶೆಣೈ ಅವರ ಜನ್ಮದಿನದ ಸ್ಮರಣಾರ್ಥ ಅವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಮಾತನಾಡಿ, ಈ ಹಿಂದೆ ನಡೆದ ಎಂಟು ಆವೃತ್ತಿಗಳ ಸಿ.ಎ. ಇಂಟರ್ ತರಬೇತಿ ಶಿಬಿರಗಳು ಯಶಸ್ವಿಯಾಗಿ ಉತ್ತಮ ಫಲಿತಾಂಶ ನೀಡಿವೆ. ವಿದ್ಯಾರ್ಥಿಗಳು ನಿರಂತರ ಪ್ರಯತ್ನ, ಪರಿಶ್ರಮ ಹಾಗೂ ಛಲದ ಮೂಲಕ ತಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಗುರಿ ತಲುಪಬೇಕು. ಶಿಬಿರಾರ್ಥಿಗಳೆಲ್ಲರೂ ಸಿ.ಎ. ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂತಿಮ ಹಂತ ತಲುಪುವಂತಾಗಲಿ ಎಂದು ಶುಭ ಹಾರೈಸಿದರು.
ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಮುಖ್ಯಸ್ಥ ಸಿ.ಎ. ಗೋಪಾಲಕೃಷ್ಣ ಭಟ್ ಅವರು ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಲ್ಲಿ ಇರಬೇಕಾದ ಮಾನಸಿಕ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸದ ಮಹತ್ವವನ್ನು ವಿವರಿಸಿ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಶಿಬಿರದ ಉಪನ್ಯಾಸಕರಲ್ಲಿ ಒಬ್ಬರಾದ ಸಿ.ಎ. ಸುಭದ್ರಾ ಐತಾಳ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸುಸಜ್ಜಿತ ಸೌಲಭ್ಯಗಳೊಂದಿಗೆ ವ್ಯವಸ್ಥಿತ ಮಾರ್ಗದರ್ಶನ ಒದಗಿಸುವ ಇಂತಹ ಉಪಯುಕ್ತ ತರಬೇತಿ ಶಿಬಿರವನ್ನು ಆಯೋಜಿಸಿರುವ ವಿಶ್ವ ಕೊಂಕಣಿ ಕೇಂದ್ರದ ಕಾರ್ಯವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶಿಸ್ತು ಮತ್ತು ಪರಿಶ್ರಮದೊಂದಿಗೆ ಜೀವನದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಹೊರರಾಜ್ಯಗಳಿಂದಲೂ ಅನುಭವಿ ಉಪನ್ಯಾಸಕರನ್ನು ಆಹ್ವಾನಿಸಿ ತರಬೇತಿ ನೀಡಲಾಗಿತ್ತು. ಆಧುನಿಕ ಬೋಧನಾ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ಹಾಗೂ ಪರೀಕ್ಷಾ ಸಿದ್ಧತೆಯ ಮೂಲಕ ವಿದ್ಯಾರ್ಥಿಗಳನ್ನು ಅಂತಿಮ ಹಂತಕ್ಕೆ ಸಜ್ಜುಗೊಳಿಸುವುದು ಈ ಶಿಬಿರದ ಉದ್ದೇಶವಾಗಿತ್ತು. ಸಿ.ಎ. ಉಲ್ಲಾಸ್ ಕಾಮತ್ ಅವರ ಯು.ಕೆ. ಆಂಡ್ ಕೋ ಹಾಗೂ ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯಲ್ಲಿ ಸಹಭಾಗಿಗಳಾಗಿವೆ.
ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಪ್ರೊ. ಗೌರಿ ಕಾಮತ್ ಹಾಗೂ ಬಸ್ತಿ ಮಾಧವ ಶೆಣೈ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಮುಂಬೈ ಹಾಗೂ ಕೇರಳ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ತರಬೇತಿಯ ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿ ಸಮೀಕ್ಷಾ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.

