ಕಲ್ಲಡ್ಕ : ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯ. ಮಕ್ಕಳಿಗೆ ಸ್ವತಂತ್ರವಾಗಿ ಯೋಚಿಸಲು, ಹೊಸ ವಿಷಯಗಳನ್ನು ಕಲಿಯಲು ಮತ್ತು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶ ನೀಡಬೇಕು.
ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿ, ಕ್ರೀಡಾಕೂಟ, ವಿಜ್ಞಾನ ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಗಳಾಗಿವೆ ಎಂಬುದಾಗಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಡಾಕ್ಟರ್ ಗಾಯತ್ರಿ ಈ ಪ್ರಕಾಶ್ ಹೇಳಿದರು.
ಅವರು ನವೆಂಬರ್ 12 ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನೂ ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳು ದೇಶದ ಅಮೂಲ್ಯ ಸಂಪತ್ತು. ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಮಕ್ಕಳ ಪ್ರತಿಭೆಯು ಅರಳುವ ಸುಂದರ ಹೂವಿನಂತೆ. ಅದಕ್ಕೆ ಸೂಕ್ತವಾದ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಅವಕಾಶ ದೊರೆತಾಗ ಮಾತ್ರ ಅದು ಜಗತ್ತಿಗೆ ಬೆಳಕಾಗುತ್ತದೆ.
ಪ್ರತಿಯೊಂದು ಮಗುವೂ ವಿಭಿನ್ನ. ಎಲ್ಲ ಮಕ್ಕಳ ಪ್ರತಿಭೆಯೂ ಒಂದೇ ರೀತಿಯಾಗಿರುವುದಿಲ್ಲ. ಆದ್ದರಿಂದ ಮಕ್ಕಳನ್ನು ಪರಸ್ಪರ ಹೋಲಿಸದೆ ಅವರಲ್ಲಿರುವ ವಿಶೇಷ ಸಾಮರ್ಥ್ಯವನ್ನು ಗುರುತಿಸಬೇಕು.
ಮಕ್ಕಳು ಮಣ್ಣಿನ ಮುದ್ದೆಯಂತಿದ್ದು, ಅವರಿಗೆ ಸರಿಯಾದ ಶಿಕ್ಷಣ ಮತ್ತು ಪ್ರೋತ್ಸಾಹ ನೀಡಿದರೆ ಸುಂದರ ಮೂರ್ತಿಗಳಾಗಿ ರೂಪುಗೊಳ್ಳುತ್ತಾರೆ. ಪ್ರತಿಯೊಂದು ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಯುವವಾಹಿನಿ (ರಿ) ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್ ಮಾತನಾಡಿ ಪ್ರತಿಯೊಂದು ಮಗುವೂ ಪ್ರತಿಭೆಯ ಗಣಿಯಾಗಿದೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದೇ ನಿಜವಾದ ಶಿಕ್ಷಣ.ಮಕ್ಕಳ ಪ್ರತಿಭೆಯನ್ನು ಮೊದಲು ಗುರುತಿಸುವವರು ಅವರ ತಂದೆ-ತಾಯಿ, ಹಾಗೂ ಶಿಕ್ಷಕರು. ಪೋಷಕರು ಮಕ್ಕಳ ಆಸಕ್ತಿ ಮತ್ತು ಅಭಿರುಚಿಗಳನ್ನು ಗಮನಿಸಬೇಕು. ತಮ್ಮ ಆಸೆ, ಕನಸು ಮತ್ತು ನಿರೀಕ್ಷೆಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು. ಪ್ರತಿಯೊಂದು ಮಗುವಿಗೂ ತನ್ನದೇ ಆದ ಆಸಕ್ತಿ ಮತ್ತು ಗುರಿಗಳಿರುತ್ತವೆ ಎಂಬುದನ್ನು ಅರಿತುಕೊಳ್ಳಬೇಕು.
ಮಕ್ಕಳು ಯಾವುದಾದರೂ ಹೊಸ ಪ್ರಯತ್ನ ಮಾಡಿದಾಗ ಅವರನ್ನು ಪ್ರೋತ್ಸಾಹಿಸಬೇಕು. ತಪ್ಪು ಮಾಡಿದಾಗ ಬೈಯುವ ಬದಲು ತಪ್ಪಿನಿಂದ ಪಾಠ ಕಲಿಯುವಂತೆ ಮಾರ್ಗದರ್ಶನ ನೀಡಬೇಕು. ಮಕ್ಕಳಿಗೆ ಸ್ವತಂತ್ರವಾಗಿ ಯೋಚಿಸಲು, ಪ್ರಶ್ನೆಗಳನ್ನು ಕೇಳಲು ಮತ್ತು ಹೊಸ ಪ್ರಯೋಗಗಳನ್ನು ಮಾಡಲು ಅವಕಾಶ ನೀಡಬೇಕು.
ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು. ಆದ್ದರಿಂದ ಅವರ ಸಣ್ಣ ಸಾಧನೆಯನ್ನೂ ಮೆಚ್ಚಿ, ಮುಂದಿನ ಸಾಧನೆಗೆ ಪ್ರೇರಣೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ ವಹಿಸಿದ್ದರು. ಕೆಲಿಂಜ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹಿತ್ ಶೆಟ್ಟಿ ಮಾತನಾಡಿ ಕೆಲಿಂಜ ಶಾಲೆಯಲ್ಲಿ ಪ್ರತಿಭಾ ಕಾರಂಜಿಯನ್ನು ವಿಜ್ರಂಭಣೆಯಿಂದ ಮಾಡಬೇಕೆನ್ನುವುದು ನಮ್ಮ ಕನಸಾಗಿತ್ತು, ಆದರೆ ದುರದೃಷ್ಟ ನಮ್ಮ ಮುಖ್ಯ ಶಿಕ್ಷಕರನ್ನು ಕಳೆದುಕೊಂಡು ನೋವಿನಲ್ಲಿ ಕಾರ್ಯಕ್ರಮ ಮಾಡಲು ಅಸಾಧ್ಯವಾದಾಗ ಜವಾಬ್ದಾರಿಯನ್ನು ವಹಿಸಿಕೊಂಡು ನಾವು ಯೋಚಿಸಿದಕ್ಕೂ ವಿಭಿನ್ನವಾಗಿ ಕಾರ್ಯಕ್ರಮವನ್ನು ದಿವಂಗತ ಮುಖ್ಯ ಶಿಕ್ಷಕೀಯ ಗೌರವಾರ್ಥ ಸಂಘಟಿಸಿದ ಮಜಿ ಶಾಲೆಗೆ ಅಭಿನಂದನೆಗಳು ಎಂದರು.
ವೇದಿಕೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ದಿನೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಬು ಕುಮಾರ್ ಶರ್ಮ, ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಜನಾರ್ಧನ ಪೂಜಾರಿ,ಕೆಲಿಂಜ ಶಾಲಾ ನಿಕಟಪೂರ್ವ ಅಧ್ಯಕ್ಷ ಹಮೀದ್, ಬಂಟ್ವಾಳ ತಾಲೂಕು ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಕುರ್ಚಿಗುಡ್ಡೆ , ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಶ್ವರ ಭಟ್, ಸುಕುಮಾರ್ ಬಂಟ್ವಾಳ,ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಗಾಯತ್ರಿ, ಶಾಲಾ ನಾಯಕ ಮಹಮ್ಮದ್ ಹಾರೂನ್ ಫರ್ಹಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಸುಮಾರು 300 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಇಲಾಖಾ ವತಿಯಿಂದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಬಿಐಆರ್ಟಿ ಸುರೇಖಾ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ, ಪ್ರಭಾರ ಸಮನ್ವಯಾಧಿಕಾರಿ ವಿದ್ಯಾ ಮೊದಲಾದವರು ಆಗಮಿಸಿ ಶುಭ ಹಾರೈಸಿ ಕಾರ್ಯಕ್ರಮದ ಅಚ್ಚುಕಟ್ಟಿನ ವ್ಯವಸ್ಥೆಯನ್ನು ಪ್ರಶಂಸಿಸಿದರು.
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಆಕರ್ಷಣೀಯ ಸೆಲ್ಫಿ ಕಾರ್ನರ್ ಮಾಡಲಾಗಿತ್ತು. ಮಿನಿ ಲೈಬ್ರರಿ ರಿಕ್ಷಾ ಶಾಲಾ ಆವರಣದಲ್ಲಿ ನಿಲ್ಲಿಸಿ ಮಕ್ಕಳಿಗೆ ಓದು ಅಭ್ಯಾಸಗಳ ಬಗ್ಗೆ ಪ್ರೋತ್ಸಾಹಿಸಲು ಮಾಹಿತಿ ನೀಡಲಾಯಿತು. ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಉದ್ಘಾಟಿಸಲಾಯಿತು.
ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು, ದೈಹಿಕ ಶಿಕ್ಷಕ ಇಂದು ಶೇಖರ್ ವಂದಿಸಿದರು. ಶಿಕ್ಷಕ ತೌಸೀಫ್ ಅಹ್ಮದ್ ಹಾಗೂ ಹಿರಿಯ ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಶಾಲಾ ಶಿಕ್ಷಕಿಯರು ಸಹಕರಿಸಿದರು.

