ಮಂಗಳೂರಿಗೆ ಪ್ರಧಾನಿ ಮೋದಿ ಕೊಡುಗೆ : ಭೂಗತ ಎಲ್‌ಪಿಜಿ ಸಂಗ್ರಹಾಗಾರ ಲೋಕಾರ್ಪಣೆ!

0
43

ಮಂಗಳೂರು : ರಾಜ್ಯದ ಇಂಧನ ಮೂಲಸೌಕರ್ಯಕ್ಕೆ ಮತ್ತಷ್ಟು ಬಲ ತುಂಬುವ ಮಹತ್ವದ ಎರಡು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಲಿದ್ದಾರೆ. ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ವತಿಯಿಂದ ಬೆಂಗಳೂರಿನ ದೇವನಗೊಂತಿಯಲ್ಲಿ ಸುಮಾರು 330 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಮಾರ್ಕೆಟಿಂಗ್ ಟರ್ಮಿನಲ್‌ನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಸುಮಾರು 850 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರವನ್ನೂ ಲೋಕಾರ್ಪಣೆ ಮಾಡಲಿದ್ದಾರೆ.

ಕರ್ನಾಟಕದ ಇಂಧನ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ದೇವನಗೊಂತಿ ಮಾರ್ಕೆಟಿಂಗ್ ಟರ್ಮಿನಲ್‌ನ್ನು 20 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಇಂಧನ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ಸಾಧ್ಯವಾಗಲಿದೆ. ಅಲ್ಲದೆ, ರಾಜ್ಯದ ಕೈಗಾರಿಕಾ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ.

ಮಂಗಳೂರಿನ MRPL ಸಂಸ್ಕರಣಾಗಾರಕ್ಕೆ 363 ಕಿ.ಮೀ. ಉದ್ದದ ಮಂಗಳೂರು-ಹಾಸನ-ಬೆಂಗಳೂರು ಪೈಪ್‌ಲೈನ್ ಮೂಲಕ ಈ ಟರ್ಮಿನಲ್ ಸಂಪರ್ಕ ಹೊಂದಿದೆ. ಒಟ್ಟು 77 ಸಾವಿರ ಕಿಲೋಲೀಟರ್ ಇಂಧನ ಸಂಗ್ರಹ ಸಾಮರ್ಥ್ಯ ಹೊಂದಿರುವ ಘಟಕದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ (ATF) ಸಂಗ್ರಹ ಮತ್ತು ನಿರ್ವಹಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣ, MRPLನ ಹೈಕ್ಯೂ ಚಿಲ್ಲರೆ ಮಾರಾಟ ಮಳಿಗೆಗಳು, ತೈಲ ಮಾರುಕಟ್ಟೆ ಕಂಪನಿಗಳು ಹಾಗೂ ವಿವಿಧ ಕೈಗಾರಿಕಾ ಗ್ರಾಹಕರಿಗೆ ಇಲ್ಲಿಂದ ಇಂಧನ ಪೂರೈಕೆಯಾಗಲಿದೆ.

ಈ ಯೋಜನೆಯ ವಿಶೇಷತೆಯೆಂದರೆ ಪರಿಸರ ಸಂರಕ್ಷಣೆಗೆ ನೀಡಿರುವ ಆದ್ಯತೆ. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಮೂಲಕ ರಸ್ತೆ ಮಾರ್ಗದಲ್ಲಿ ಇಂಧನ ಸಾಗಿಸುವುದನ್ನು ತಪ್ಪಿಸಿ ಪೈಪ್‌ಲೈನ್ ಮೂಲಕ ಪೂರೈಕೆ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಇದರಿಂದ ವಾರ್ಷಿಕ ಸುಮಾರು 40 ಸಾವಿರ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯುವ ನಿರೀಕ್ಷೆಯಿದೆ. ಟ್ಯಾಂಕರ್‌ಗಳ ಸಂಚಾರ ಕಡಿಮೆಯಾಗುವುದರಿಂದ ರಸ್ತೆ ಸುರಕ್ಷತೆಯೂ ಹೆಚ್ಚಲಿದೆ.

ಇದರೊಂದಿಗೆ ಎಥೆನಾಲ್ ಮತ್ತು ಜೈವಿಕ ಡೀಸೆಲ್ ಸಂಗ್ರಹಣೆ ಹಾಗೂ ಮಿಶ್ರಣಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪರಿಸರ ಸ್ನೇಹಿ ಇಂಧನ ಬಳಕೆಗೆ ಉತ್ತೇಜನ ನೀಡುವ ಈ ಯೋಜನೆಯಿಂದ 280ಕ್ಕೂ ಅಧಿಕ ಮಂದಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಮಂಗಳೂರಿನಲ್ಲಿ ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರ

ಮಂಗಳೂರಿನಲ್ಲಿ ನಿರ್ಮಿಸಲಾಗಿರುವ 80 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಭೂಗತ ಎಲ್‌ಪಿಜಿ ಸಂಗ್ರಹಾಗಾರ ದೇಶದ ಅತಿದೊಡ್ಡ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ದೇಶದ ಎಲ್‌ಪಿಜಿ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ.

ದೇಶದ ಮೊದಲ ಭೂಗತ ಅನಿಲ ಸಂಗ್ರಹಾಗಾರವನ್ನು 2008ರಲ್ಲಿ ವಿಶಾಖಪಟ್ಟಣದಲ್ಲಿ ನಿರ್ಮಿಸಲಾಗಿತ್ತು. ಇದೀಗ ಮಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಬೃಹತ್ ಸಂಗ್ರಹಾಗಾರವು ಹೆಚ್ಚಿನ ಪ್ರಮಾಣದ ಎಲ್‌ಪಿಜಿಯನ್ನು ಸುರಕ್ಷಿತವಾಗಿ ಸಂಗ್ರಹಿಸಲು ನೆರವಾಗಲಿದೆ. ತುರ್ತು ಸಂದರ್ಭಗಳಲ್ಲಿ ಅನಿಲ ಪೂರೈಕೆಯ ನಿರಂತರತೆಯನ್ನು ಕಾಪಾಡುವುದರ ಜತೆಗೆ ದೇಶದ ಇಂಧನ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಈ ಎರಡು ಯೋಜನೆಗಳ ಲೋಕಾರ್ಪಣೆಯಿಂದ ಕರ್ನಾಟಕದ ಇಂಧನ ಪೂರೈಕೆ ವ್ಯವಸ್ಥೆ, ಕೈಗಾರಿಕಾ ಬೆಳವಣಿಗೆ ಹಾಗೂ ದೇಶದ ಇಂಧನ ಭದ್ರತೆಗೆ ಮತ್ತಷ್ಟು ಬಲ ದೊರೆಯಲಿದೆ ಎಂದು MRPL ಪ್ರಕಟಣೆ ತಿಳಿಸಿದೆ.