ಉಡುಪಿ : ಮಾನಸಿಕ ಅಸ್ವಸ್ಥ ಯುವಕನೊಬ್ಬ ತಡರಾತ್ರಿ ಉಗ್ರವಾಗಿ ವರ್ತಿಸಿ ದಾಂಧಲೆ ನಡೆಸಿದ ಪರಿಣಾಮ ಗಾಢ ನಿದ್ದೆಯಲ್ಲಿದ್ದ ಪರಿಸರದ ನಿವಾಸಿಗಳು ಆತಂಕಗೊಂಡ ಘಟನೆ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿಯ ಬಲಾಯಿಪಾದೆ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ಚಂದ್ರಶೇಖರ ಮಾಲಿಕತ್ವದ ಟಯರ್ ರೀಸೋಲ್ ಅಂಗಡಿಯ ಬಳಿ ಬಂದ ಯುವಕ ದಾಂಧಲೆ ನಡೆಸಲಾರಂಭಿಸಿದ್ದಾನೆ. ಇದರಿಂದ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಧಾವಿಸಿದ 112 ತುರ್ತು ಸಹಾಯವಾಹಿನಿಯ ಪೊಲೀಸರು ಹಾಗೂ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ನಿತ್ಯಾನಂದ ಒಳಕಾಡು ಅವರಿಗೆ ಹಸ್ತಾಂತರಿಸಿದರು.
ನಂತರ ಒಳಕಾಡು ಅವರು ಯುವಕನನ್ನು ಆಂಬುಲೆನ್ಸ್ ಮೂಲಕ ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಿದರು. ಈ ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಹೆಡ್ ಕಾನ್ಸ್ಟೆಬಲ್ ಪ್ರಸನ್ನ ಹಾಗೂ ಲೋಕೇಶ್ ಸಹಕರಿಸಿದರು.
ಯುವಕ ಕೇರಳ ಮೂಲದವನೆಂದು ತಿಳಿದುಬಂದಿದ್ದು, ಈ ಕುರಿತು ಆತನ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣವೇ ಹೆತ್ತವರು ಉಡುಪಿಗೆ ಬಂದಿದ್ದು, ಬಳಿಕ ಮಗನನ್ನು ಹೆತ್ತವರ ಮಡಿಲಿಗೆ ಒಪ್ಪಿಸಲಾಯಿತು.

