ಮೊಟ್ಟೆ ಸಾಗಿಸುವ ವಾಹನದಲ್ಲಿ 16 ಜಾನುವಾರುಗಳ ಅಕ್ರಮ ಸಾಗಾಟ ಪತ್ತೆ: ಇಬ್ಬರ ಬಂಧನ

0
12

ಮಂಗಳೂರು: ಮೊಟ್ಟೆ ಸಾಗಾಟದ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಮಂಗಳೂರು ನಗರದ ಕಂಕನಾಡಿ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದು, 16 ಜಾನುವಾರುಗಳನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಮೈಸೂರಿನ ಮಹಮ್ಮದ್ ರಫೀಕ್ ಹಾಗೂ ರೆಹಮಾನ್ ಬಂಧಿತ ಆರೋಪಿಗಳು. ಸೋಮವಾರ ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್ ಸಮೀಪದ ಉಜ್ಜೋಡಿ ಬಳಿ ಈ ಕಾರ್ಯಾಚರಣೆ ನಡೆದಿದೆ.

‘ಸ್ಟಾರ್ ಎಗ್’ ಎಂದು ಬರೆದಿದ್ದ ಮೊಟ್ಟೆ ಸಾಗಾಟದ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದಾಗ ವಾಹನದ ಒಳಭಾಗದಲ್ಲಿ 16 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿದೆ.

ವಾಹನದ ಹಿಂಭಾಗದಲ್ಲಿ ಮೊಟ್ಟೆಗಳನ್ನು ಸಾಗಿಸಲು ಬಳಸುವ ಟ್ರೇಗಳನ್ನು ಪೇರಿಸಿಡಲಾಗಿತ್ತು. ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ಜಾನುವಾರುಗಳನ್ನು ತಂದು ಕೇರಳದ ಕಾಸರಗೋಡಿಗೆ ಮಾಂಸಕ್ಕಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ರಕ್ಷಿಸಲಾದ 16 ಜಾನುವಾರುಗಳನ್ನು ಫಜೀರ್‌ನ ಗೋಶಾಲೆಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.