ಅಭಿಮಾನಿಗಳಿಗಾಗಿ ಕಲಾವಿದ ಶ್ರಮಿಸುತ್ತಾನೆ-ರವಿಪ್ರಸಾದ್ ಶೆಟ್ಟಿ
ಮೂಡುಬಿದಿರೆ : ಬಲಿಪ ಪ್ರಸಾದ ಭಾಗವತ 50ರ ನೆನಪು “ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್” ಸರಣಿಯ 17ನೇ ಕಾರ್ಯಕ್ರಮವು ಇಲ್ಲಿನ ಜೈನ ಪ್ರೌಢಶಾಲೆಯ ಸಭಾಂಗಣದಲ್ಲಿ ಡಿ.ಜೆ.ವಿ.ವಿ. ಸಂಘದ ಸಂಚಾಲಕ ಕೆ. ಹೇಮರಾಜ್ ಅವರ ಅಧ್ಯಕ್ಷತೆಯಲ್ಲಿ ನ. 16ರಂದು ನೆರವೇರಿತು. ಶಾಲೆಯ ಹಳೆವಿದ್ಯಾರ್ಥಿಯೂ ಆಗಿರುವ ಕಟೀಲು ಮೇಳದ ಯುವ ಕಲಾವಿದ ಅಕ್ಷಯ್ ಭಟ್ ಶಿರ್ತಾಡಿ ಅವರಿಗೆ ಸರಣಿಯ 17ನೇ ಸನ್ಮಾನವನ್ನು ನೀಡಿ ಗೌರವಿಸಲಾಯಿತು.

ಬಲಿಪ ಪ್ರಸಾದ ಭಾಗವತರ ಸಂಸ್ಮರಣೆಗೈದ ಲಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಪ್ರಸಾದ್ ಕೆ. ಶೆಟ್ಟಿಯವರು ಮಾತನಾಡಿ “ಕಲಾವಿದ ತನಗಾಗಿ ದುಡಿಯುವುದಿಲ್ಲ. ಅಭಿಮಾನಿ ಬಂಧುಗಳಿಗಾಗಿ ತಮ್ಮ ಜೀವನವನ್ನು ಸವೆಸುತ್ತಾರೆ. ಕಲೆಯನ್ನು ಸಂಪಾದನೆಗಾಗಿ ಮಾಡುತ್ತಿದ್ದರೂ ಆ ಕಲೆಯನ್ನು ಆರಾಧಿಸಿಕೊಂಡು ಆ ಕಲೆಯಿಂದ ಪ್ರಂಪಚಕ್ಕೆ ಕೊಡುಗೆಯಾಗಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸಿದ ಮೇರು ವ್ಯಕ್ತಿತ್ವದ ಓರ್ವ ಭಾಗವತರು ಬಲಿಪ ಪ್ರಸಾದರು.
ಹಿರಿಯರ ಪರಂಪರೆಯನ್ನು ಉಳಿಸಿಕೊಂಡು ತನ್ನ ತಂದೆಯವರು ದುಡಿಯುತ್ತಿದ್ದ ಕಟೀಲು ಮೇಳದಲ್ಲೇ ಓರ್ವ ಕಲಾವಿದರಾಗಿ ಸೇರಿಕೊಂಡು ಸಣ್ಣ ವಯಸ್ಸಿನಲ್ಲಿಯೇ ಭಾಗವತಿಕೆಯಲ್ಲಿ ನಂ. 1 ಸ್ಥಾನಕ್ಕೆ ಏರಿದವರು. ಸರಳ ಸಜ್ಜನಿಕೆಯ ವ್ಯಕ್ತಿತ್ವ, ಯಾರಲ್ಲಿಯೂ ಮುನಿಸು ತೋರಿಸದೆ, ಯಾವಾಗಲೂ ನಗು ಮುಖದಿಂದ ರಂಗಸ್ಥಳಕ್ಕೆ ಬಂದು ಹಾಡುವ ತಮ್ಮ ಜವಾಬ್ದಾರಿಯನ್ನು ನಿಷ್ಥೆಯಿಂದ ಪಾಲಿಸುತ್ತಾ, ಯಾವುದೇ ರಾಜಕೀಯಕ್ಕೆ ಆಸ್ಪದ ನೀಡಿದೆ ತಮ್ಮ ವ್ಯಕ್ತಿತ್ವ ಏನು ಎಂಬುದನ್ನು ಸಾಬೀತು ಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು” ಎಂದು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಕ್ಷಯ್ ಭಟ್ ಪ್ರಸಾದರ ಜತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡು “ಬೆಳಗ್ಗಿನವರೆಗೆ ಯಕ್ಷಗಾನ ನಡೆಯುತ್ತಿದ್ದ ಕಾಲದಲ್ಲಿ ಬಿಳಿ ಐದು ಶೃತಿಯಲ್ಲಿ ಹಾಡುತ್ತಿದ್ದ ಬಲಿಪ ಪ್ರಸಾದರೇ ಬೆಳಗಿನ ಹೊತ್ತು ಹಾಡುವ ಭಾಗವತರಾಗಿದ್ದರು. ಅವರ ಹಾಡುಗಾರಿಕೆ ಎದುರು ಕುಳಿತ ಪ್ರೇಕ್ಷಕರನ್ನು ಮಾತ್ರವಲ್ಲದೆ ಕುಣಿಸಿಕೊಂಡು ಹೋಗುವ ಚತುರತೆ ಅವರಲ್ಲಿತ್ತು ಎಂದರಲ್ಲದೆ ಹಿಂದೆ ಈ ಶಾಲೆಯಲ್ಲಿ ಕಲಿತ ದಿನಗಳನ್ನು ಸ್ಮರಿಸಿಕೊಂಡು ನಮ್ಮನ್ನು ದಂಡಿಸಿದ ಶಿಕ್ಷಕರೇ ಮುಂದಿನ ದಿನಗಳಲ್ಲಿ ನಮ್ಮ ಸಾಧನೆಯನ್ನು ಕಂಡು ಸಂತೋಷ ಪಡುವಾಗ ಸಾರ್ಥಕತೆಯ ಭಾವ ಮೂಡುತ್ತದೆ. ಯಾವುದೇ ಉದ್ಯೋಗ ಕ್ಷೇತ್ರವಾದರೂ ಸಾಧನೆ ಮಾಡಲು ಹಲವು ದಾರಿಗಳಿರುತ್ತದೆ. ಶಿಷ್ಯರಾದ ನಾವು ನಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದಾಗ ಗುರುಗಳು ಸಂತೋಷ ಪಡುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಕೆ. ಹೇಮರಾಜ್ ಅವರು ಮಾತನಾಡಿ “ಬಲಿಪ ಪರಂಪರೆಯನ್ನು ಬೆಳಗಿಸಿ ಮರೆಯಾದ ಪ್ರಸಾದ ಭಾಗವತರು ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದ್ದು ಇಂತಹ ಮೇರುಪಂಕ್ತಿಯ ಕಲಾವಿದರ ಸಂಸ್ಮರಣೆ ಕಾರ್ಯಕ್ಕೆ ಪ್ರೋತ್ಸಾಹ ನೀಡಲು ತಮ್ಮ ಸಂಸ್ಥೆ ಸದಾ ಸಿದ್ಧವಿದೆ ಎಂದರು.
ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ರುಕ್ಕಯ್ಯ ಪೂಜಾರಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಾಮಪ್ರಸಾದ್, ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ, ಹಿರಿಯ ಯಕ್ಷಗುರು ಅನಂತ ಪದ್ಮನಾಭ ಹೊಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜ್ಯೋತಿಷ್ಯ ಮತ್ತು ವಾಸ್ತು ತಜ್ಞ ಎಂ. ರಾಘವೇಂದ್ರ ಭಂಡಾರ್ಕಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ ಸನ್ಮಾನಪತ್ರ ವಾಚಿಸಿದರು. ಸಂಘಟಕ ಕೃಷ್ಣಕುಮಾರ್ ಅತಿಥಿಗಳನ್ನು ಗೌರವಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ವಾಸು ನಾಯ್ಕ, ವಿಶ್ವನಾಥ ನಾಯಕ್ ಕಲ್ಲಬೆಟ್ಟು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕನ್ನಡ ಅಧ್ಯಾಪಕ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

