ಉಡುಪಿ : ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರಿಲ್ಲದೆ ರಕ್ಷಿಸಿಡಲಾಗಿದ್ದ ಅಪರಿಚಿತ ವ್ಯಕ್ತಿಯ ಮೃತದೇಹದ ಅಂತ್ಯಕ್ರಿಯೆಯನ್ನು ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಮಣಿಪಾಲ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕ ಜಾಸ್ವ ಅವರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪ್ಲವರ್ ವಿಷ್ಣು, ವಿಕಾಸ್ ಶೆಟ್ಟಿ, ಸತೀಶ್ ಕುಮಾರ್ ಹಾಗೂ ಸಾಜಿ ಕುಮಾರ್ ಭಾಗವಹಿಸಿದ್ದರು. ಉಡುಪಿ ನಗರಸಭೆ ಅಗತ್ಯ ಸಹಕಾರ ನೀಡಿತು.

ಕಳೆದ ನವೆಂಬರ್ 6ರಂದು ಇಂದ್ರಾಳಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನ ರೈಲು ಹಳಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ತಡರಾತ್ರಿ ಪತ್ತೆಯಾಗಿತ್ತು. ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ರೈಲಿನ ಚಕ್ರಕ್ಕೆ ಸಿಲುಕಿರಬಹುದೇ ಅಥವಾ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿತ್ತು. ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿತ್ತು.

