ತೋಡಾರು, ತೆಂಕ ಹಾಗೂ ಬಡಗಮಿಜಾರು ಗ್ರಾಮಗಳ ವಿಶಾಲ ಆಟದ ಮೈದಾನ ಉಳಿಯಲಿ

0
52

ವರದಿ ರಾಯಿ ರಾಜ ಕುಮಾರ

ಸುಮಾರು 107 ವರ್ಷಗಳ ಇತಿಹಾಸವಿರುವ ಮಿಜಾರು ಶಾಲಾ ಆಟದ ಮೈದಾನ ಅದರ ಮೂಲ ಉದ್ದೇಶ ಮತ್ತು ಸ್ವರೂಪಕ್ಕೆ ಧಕ್ಕೆಯಾಗದಂತೆ ಉಳಿಯಬೇಕು ಎಂದು ಊರ ಮಹನೀಯರು ಒತ್ತಾಯಿಸುತ್ತಿದ್ದಾರೆ. ಶಾಲಾ ಆಟದ ಮೈದಾನದಲ್ಲಿ ಶಾಲೆಗಾಗಿ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಿದ ಶಾಲಾ ಮುಖ್ಯಸ್ಥರುಗಳ ಕ್ರಮವನ್ನು ತೋಡಾರು, ತೆಂಕ ಹಾಗೂ ಬಡಗಮಿಜಾರು, ಇರುವೈಲು ಗ್ರಾಮಗಳ ಮುಖ್ಯಸ್ಥರುಗಳು, ವಿದ್ಯಾಭಿಮಾನಿಗಳು, ಶಾಲಾ ಹಿತ ಚಿಂತಕರು, ಶಾಲಾ ಹಳೆಯ ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಈ ಬಗ್ಗೆ ಜನಜಾಗೃತಿಯನ್ನು ಮೂಡಿಸಲು ಮೇಲ್ಕಂಡ ಎಲ್ಲರೂ ಪ್ರಾರಂಭಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿಗಳಾದ ದಿವಾಕರ ಶೆಟ್ಟಿ, ಡಿ ಎ ಉಸ್ಮಾನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಮಾಜಿ ತಾಲೂಕ ಪಂಚಾಯತ್ ಸದಸ್ಯ ಎಂಜಿ ಮಹಮ್ಮದ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಎಂ ಎ ಅಬ್ದುಲ್ ರಜಾಕ್, ಎಂ ಎ ಅಶ್ವಥ್ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಮೇಲ್ಕಂಡ ಎಲ್ಲರೂ ಶಾಲಾ ಮುಖ್ಯಸ್ಥರ ಪ್ರಯತ್ನವನ್ನು ಖಂಡಿಸಿದ್ದಾರೆ. ಅಲ್ಲದೆ ಇನ್ನು ಮುಂದೆಯೂ ಕೂಡ ಈ ಆಟದ ಮೈದಾನವನ್ನು ಇದ್ದಂತೆಯೇ ಉಳಿಸಿಕೊಂಡು ಶಾಲೆಯ ಮಕ್ಕಳಿಗೆ ಉಪಯೋಗವಾಗುವ ಆಟೋಟ, ಕ್ರೀಡೆ, ತರಬೇತಿ ಇತ್ಯಾದಿಗಳಿಗೆ ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ. ಏಕೆಂದರೆ ಇಲ್ಲಿ ತರಬೇತಿ ಮತ್ತು ಪರಿಣತಿಯನ್ನು ಪಡೆದ ಹಲವಾರು ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ, ರಾಜ್ಯ, ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರೀಡಾಪಟು ಪ್ರತಿಭೆಯನ್ನು ಬೆಳಗಿರುತ್ತಾರೆ ಎಂದು ಬೊಟ್ಟು ಮಾಡಿರುತ್ತಾರೆ.

ಇಡೀ ಮೂಡುಬಿದಿರೆಯಲ್ಲಿ ಇಷ್ಟೊಂದು ವಿಶಾಲವಾದ, ಸುಂದರವಾದ ಆಟದ ಬಯಲು ಈ ಮೂರು ಗ್ರಾಮಗಳಲ್ಲಿ ಬೇರೆ ಕಡೆ ಇಲ್ಲ ಎಂಬುದನ್ನು ನೆನಪಿಸಿದ್ದಾರೆ. ಆದುದರಿಂದ ಸಾರ್ವಜನಿಕರು, ವಿದ್ಯಾಭಿಮಾನಿಗಳು ಇರುವ ವ್ಯವಸ್ಥೆಯನ್ನು ಉಳಿಸಿಕೊಂಡು ಕಟ್ಟಡ ನಿರ್ಮಿಸಲು ಲಭ್ಯವಿರುವ ಬೇರೆ ಪ್ರದೇಶದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಆಟದ ಮೈದಾನದ ಶ್ರೇಷ್ಠತೆಯನ್ನು ಕಾಪಾಡಲು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ, ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಉಳಿಸಬೇಕೆಂದು ಕೇಳಿಕೊಂಡಿರುತ್ತಾರೆ. ಈ ಬಗ್ಗೆ ಸ್ಥಳೀಯ ಶಾಸಕರು, ಇಲಾಖಾ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here