ರಾಜ್ಯ ಕಾಂಗ್ರೆಸ್ ಸರಕಾರ ಸತತ 3 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯ 39 ಸಾವಿರ ಕೋಟಿ ರೂಪಾಯಿಯನ್ನು ದುರುಪಯೋಗ ಮಾಡಿಕೊಂಡಿದೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಎಸ್ಸಿ ಎಸ್ಟಿ ಅಭಿವೃದ್ಧಿಗೆ ನೀಡಬೇಕಾದ ಹಣವನ್ನು ಗ್ಯಾರಂಟಿಗೆ ನೀಡಲಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ‘7ಡಿ’ ಕಾಯ್ದೆಯನ್ನು ಕಿತ್ತು ಹಾಕಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯನ್ನು ಬಲಪಡಿಸಿದ್ದೇ ನಾವು ಎಂದು ಬೆನ್ನು ತಟ್ಟಿಕೊಳ್ಳುವ ಸಿದ್ಧರಾಮಯ್ಯ ಒಳಗೊಳಗೆ ‘7ಸಿ’ ಮೂಲಕ ದಲಿತರ ಮೀಸಲು ನಿಧಿಗೆ ಕನ್ನ ಹಾಕುತ್ತಿದ್ದಾರೆ.
ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯ ಮೂಲ ಉದ್ದೇಶವೇನು ?
* ಪ್ರತಿ ಇಲಾಖೆಯು ತನ್ನ ಬಜೆಟ್ ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ (ಕರ್ನಾಟಕದಲ್ಲಿ 24.1%) ಹಣ ತೆಗೆದಿರಿಸಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಬಳಸಬೇಕು. ಅದಕ್ಕಾಗಿ ಪ್ರತಿ ಇಲಾಖೆಯೂ ಉಪಯೋಜನೆ ರೂಪಿಸಬೇಕು.
* ದಲಿತರ, ಆದಿವಾಸಿಗಳ ಸಬಲೀಕರಣಕ್ಕೆ ಆದ್ಯತೆ ನೀಡುವುದು.
* ದಲಿತ ಕೇರಿ, ಕಾಲೋನಿ, ಹಾಡಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು.
* ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಸತಿ ಸ್ವಾವಲಂಬನೆಗೆ ಒತ್ತು ನೀಡುವುದು.
ಆದರೆ ಆಗುತ್ತಿರುವುದೇನು ?
* ಗ್ಯಾರಂಟಿ ಯೋಜನೆ ಇಲಾಖೆಗಳ ಉಪಯೋಜನೆಯೇ? ಅಲ್ಲ! ಪಕ್ಷದ ಚುನಾವಣಾ ಪ್ರಣಾಳಿಕೆ ಜಾರಿಗೆ ತರುವ ಸರ್ಕಾರದ ಮುಖ್ಯ ಯೋಜನೆ. ಹೀಗಾಗಿ ದಲಿತರ ಮೀಸಲು ನಿಧಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದು ಪರಮ ಅನ್ಯಾಯ.
* ಗ್ಯಾರಂಟಿ ಯೋಜನೆ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯ ಮೂಲ ಉದ್ದೇಶವನ್ನು ಪೂರೈಸುವುದಿಲ್ಲ.
* ಗ್ಯಾರಂಟಿ ಯೋಜನೆ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮಾತ್ರ ಇಲ್ಲ. ಎಲ್ಲರಿಗೂ ಅಂದರೆ ಹಿಂದುಳಿದವರು, ಸವರ್ಣೀಯರು, ಸರ್ಕಾರಿ ನೌಕರರು ಎಲ್ಲರನ್ನು ಗ್ಯಾರಂಟಿ ಯೋಜನೆ ಒಳಗೊಳ್ಳುತ್ತದೆ.
2023ರ ಚುನಾವಣಾ ಪ್ರಚಾರದಲ್ಲಿ ಸಿದ್ಧರಾಮಯ್ಯನವರು ‘ಮಹದೇವಪ್ಪ ನಿಂಗೂ ಫ್ರೀ, ಕಾಕಾಪಾಟೀಲ ನಿಂಗೂ ಫ್ರೀ! ನಿನ್ನ ಹೆಂಡ್ತಿಗೂ ಫ್ರೀ, ನನ್ನ ಹೆಂಡ್ತಿಗೂ ಫ್ರೀ’ ಎಂದು ಹೇಳಿದ್ದು ವ್ಯಾಪಕ ಪ್ರಚಾರ ಪಡೆದಿತ್ತು. ಆದರೆ ಆದದ್ದು ಏನು?
ಕಾಕಾಪಾಟೀಲರಿಗೆ ಖಜಾನೆ ಹಣದಿಂದ ಗ್ಯಾರಂಟಿ ಕೊಡಲಾಯಿತು. ಪಾಪಾ ಅದೇ ಮಹದೇವಪ್ಪನವರಿಗೆ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣದಿಂದ ಗ್ಯಾರಂಟಿ ಕೊಟ್ಟಿದ್ದು ಸರಿಯೇ? ಇದು ಸಾಮಾಜಿಕ ನ್ಯಾಯವೇ? ಮುಸ್ಲಿಮರಿಗೆ ಗ್ಯಾರಂಟಿ ಸೌಲಭ್ಯ ಕೊಡಲು ಅಲ್ಪಸಂಖ್ಯಾತರ ಕಲ್ಯಾಣ ನಿಧಿ ಹಣವನ್ನು ಮುಟ್ಟುವುದಿಲ್ಲ. ಖಜಾನೆಯಿಂದಲೇ ಹಣ ಕೊಡುತ್ತೀರಿ. ಅದೇ ದಲಿತರಿಗೆ, ಆದಿವಾಸಿಗಳಿಗೆ ‘ದಲಿತರ ಮೀಸಲು ನಿಧಿ’ಯ ಹಣ ಕತ್ತರಿಸುವುದು ಯಾವ ನ್ಯಾಯ !? ಎಂದು ಅವರು ಪ್ರಶ್ನಿಸಿದ್ದಾರೆ.
ದಲಿತರ ಮೀಸಲು ನಿಧಿಯನ್ನು ಮುಳುಗಿಸಿದ ನಂತರವಾದರೂ ಗ್ಯಾರಂಟಿ ಯೋಜನೆಗಳು ಸರಿಯಾದ ‘ಹಳಿ’ಗಳ ಮೇಲೆ ಹೋಗುತ್ತಿದೆಯೇ? ಮೂರು, ಐದು ತಿಂಗಳಾದರೂ ಹಣ ಬಿಡುಗಡೆಯಾಗುವುದಿಲ್ಲ. ಚುನಾವಣೆ, ಉಪಚುನಾವಣೆಗೆ ಕಾದು ಕಾಸು ಬಿಡುಗಡೆ ಮಾಡುತ್ತೀರಾ? ಇಂತಹ ಕೊಳಕು ರಾಜಕೀಯ ತೆವಲು ಬೇಕಾ ಸ್ವಾಮಿ ?!
2025-26ರಲ್ಲಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಗೆ ಬಜೆಟ್ ನಲ್ಲಿ ನಿಗದಿಯಾದದ್ದು 42,018 ಕೋಟಿ ರೂ. ಆದರೆ ಈ ವರ್ಷ (2026) ಫೆ.16ರ ವರೆಗೆ ಬಳಕೆಯಾದದ್ದು 23,788 ಕೋ ರೂ ಮಾತ್ರ. ಇದರಲ್ಲಿ ಗ್ಯಾರಂಟಿ ಬಾತ್ತು 13,443 ಕೋಟಿ ರೂ. ಅಂದರೆ ಈ ವರ್ಷ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಗೆ ಖರ್ಚಾಗಿರುವುದು 10,345 ಕೋಟಿ ರೂ ಮಾತ್ರ. ಇನ್ನೂ 18,230 ಕೋಟಿ ರೂ ಖರ್ಚಾಗದೇ ಉಳಿದಿದೆ. ಈ ಅನ್ಯಾಯಕ್ಕೆ ‘7ಡಿ’ ಅನ್ವಯ. ಯಾರನ್ನು ಶಿಕ್ಷಿಸಬೇಕು ?
ಸೊರಗಿದ ಅಭಿವೃದ್ಧಿ ನಿಗಮಗಳು !
* ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ
* ಆದಿಜಾಂಬವ ಅಭಿವೃದ್ಧಿ ನಿಗಮ
* ವಾಲ್ಮೀಕಿ ಅಭಿವೃದ್ಧಿ ನಿಗಮ
* ತಾಂಡಾ ಅಭಿವೃದ್ಧಿ ನಿಗಮ
* ಲಿಡ್ಕರ್
* ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
* ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ, ಅತಿ ಸೂಕ್ಷ್ಮಜಾತಿಗಳ ಅಭಿವೃದ್ಧಿ ನಿಗಮ
42 ಸಾವಿರ ಕೋಟಿ ರೂಪಾಯಿ ದಲಿತರ ಮೀಸಲು ನಿಧಿಯಲ್ಲಿ ಈ ನಿಗಮಗಳಿಗೆ ಕೊಟ್ಟ ಹಣ ಎಷ್ಟು ಎಂದು ಅವರು ಪ್ರಶ್ನಿಸಿದ್ದಾರೆ.
ನೆಲಕಚ್ಚಿದ ಯೋಜನೆಗಳು !
* ಗಂಗಾ ಕಲ್ಯಾಣ
* ಐರಾವತ ವಾಹನ ಯೋಜನೆ
* ಭೂ ಒಡೆತನ
* ವಿದ್ಯಾರ್ಥಿಗಳ ಸ್ಕಾಲರ್ ಶಿಪ್
* ವಿದೇಶಗಳಲ್ಲಿ ಉನ್ನತ ವ್ಯಾಸಾಂಗ
* ವಸತಿ ಶಾಲೆಗಳು
* ಹಾಸ್ಟೆಲ್ ಕಟ್ಟಡಗಳು
ಈ ಯೋಜನೆಗಳಿಗೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಹಣ ಸಿಕ್ಕಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದೆಲ್ಲೆಡೆ ದಲಿತರು ಬೀದಿಗಿಳಿದಿದ್ದಾರೆ. ಹೋರಾಟ ಮಾಡಿದ್ದಾರೆ. ಅದರೆ ಎಮ್ಮೆ ಚರ್ಮದ ಸಿದ್ದರಾಮಯ್ಯ ಸರ್ಕಾರ ಮತ್ತೆ ಅದೇ ಚಾಳಿ ಮುಂದುವರಿಸುತ್ತಿದೆ .
ಬೇಡಿಕೆಗಳು :
*ಈ ಸಲ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣಕ್ಕೆ ಕೈ ಹಾಕುವುದಿಲ್ಲ ಎಂದು ಘೋಷಿಸಬೇಕು.
* ಸಂವಿಧಾನ ರಕ್ಷಣೆ ಅಭಿಯಾನಕ್ಕೆ ಖಜಾನೆಯಿಂದ ಹಣ ಕೊಡಬೇಕು. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣ ಬಳಿಸಿದರೆ ತಪ್ಪು ಸಂದೇಶ ಹೋಗುತ್ತದೆ. ಬಾಬಾ ಸಾಹೇಬರ ಸಂವಿಧಾನ ಎಲ್ಲ ಭಾರತೀಯರದ್ದು.
* ಕಳೆದ 3 ವರ್ಷದಿಂದ ದುರ್ಬಳಕೆಯಾಗಿರುವ 39 ಸಾವಿರ ಕೋಟಿ ರೂಪಾಯಿಗಳನ್ನು ದಲಿತರಿಗೆ ವಾಪಸ್ ಕೊಡಬೇಕು.
* 39 ಸಾವಿರ ಕೋಟಿ ಹಣದಲ್ಲಿ ಎಲ್ಲಾ ಜಿಲ್ಲೆಗಳ ದಲಿತರ ಅಭಿವೃದ್ಧಿಗೆ, ಮೂಲಭೂತ ಸೌಲಭ್ಯ ಒದಗಿಸಲು ತಲಾ ಒಂದು ಸಾವಿರ ಕೋಟಿ ಕೊಡಬೇಕು.
* ಎಲ್ಲಾ ಎಸ್ಸಿ, ಎಸ್ಟಿ ನಿಗಮಗಳಿಗೆ ತಲಾ ಒಂದು ಸಾವಿರ ಕೋಟಿ ರೂಪಾಯಿ ಕನಿಷ್ಟ ಅನುದಾನ ಘೋಷಿಸಬೇಕು.
* ದುರ್ಬಳಕೆಗೆ ದಾರಿ ಮಾಡಿ ಕೊಡುತ್ತಿರುವ ‘7ಸಿ’ ಕಾಯ್ದೆಯನ್ನು ರದ್ದುಮಾಡಬೇಕು.
ಗ್ಯಾರಂಟಿ ಹೆಸರಿನಲ್ಲಿ ದಲಿತರಿಗೆ ಮೋಸ ಮಾಡಿರುವ, ದಲಿತರ ಮೀಸಲು ನಿಧಿಗೆ ಕನ್ನ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಸಾಮಾಜಿಕ ನ್ಯಾಯ ಎಂಬ ವ್ಯಾಖ್ಯಾನವನ್ನು ಕೇವಲ ಬಾಷಣಕ್ಕೆ ಮೀಸಲಿಡದೆ ಪರಿಣಾಮಕಾರಿ ಅನುಷ್ಠಾನದ ಬದ್ಧತೆಯನ್ನು ತೋರಬೇಕು. ತಪ್ಪಿದಲ್ಲಿ ರಾಜ್ಯದ ಜನತೆ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಜನ ವಿರೋಧಿ ನೀತಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ದಿನಕರ ಬಾಬು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

