ಮಂಗಳೂರಿನ ಮೈಂಡ್‌ಫುಲ್ ಕನ್ಸಲ್ಟಿಂಗ್ ಸಂಸ್ಥೆಗೆ ಡಿಜಿಟಲ್ ಮಾರ್ಕೆಟಿಂಗ್ ನ ಅತ್ಯುತ್ತಮ ಅಭಿಯಾನಕ್ಕಾಗಿ ಸಿಐಐ (ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ) ಆಯೋಜಿತ ರಾಷ್ಟ್ರೀಯ ಸ್ಪರ್ಧೆಯಲ್ಲಿಅಗ್ರ ಪ್ರಶಸ್ತಿ ದೊರೆತಿದೆ.
ಈ ಸ್ಪರ್ಧೆಯಲ್ಲಿ 205 ಕಂಪೆನಿಗಳು ಭಾಗವಹಿಸಿದ್ದು ಮೈಂಡ್ ಫುಲ್ ಕನ್ಸಲ್ಟಿಂಗ್ ನ ಉಪಕ್ರಮವು ಭಾರತದ 33 ಶ್ರೇಷ್ಠ ಕಾರ್ಯವಿಧಾನಗಳಲ್ಲಿ ಒಂದಾಗಿ ಸ್ಥಾನ ಪಡೆದು, ವಿವಿಧ ಕ್ಷೇತ್ರಗಳ ಹಲವಾರು ದೊಡ್ಡ ಸಂಸ್ಥೆಗಳನ್ನು ಹಿಂದಿಕ್ಕಿದೆ.
ಶ್ರೀ ಸಂಜಯ್ ಭಟ್, ಸಂಸ್ಥಾಪಕ, ಮೈಂಡ್‌ಫುಲ್ ಕನ್ಸಲ್ಟಿಂಗ್ ಇವರು ಸ್ತನ ಕ್ಯಾನ್ಸರ್ ತಪಾಸಣೆ ಜಾಗೃತಿಯ ಮೇಲೆ ಕೇಂದ್ರೀಕರಿಸಿದ ಈ ಅಭಿಯಾನವು 1.56 ಕೋಟಿಗೂ ಅಧಿಕ ಭಾರತೀಯ ಮಹಿಳೆಯರಲ್ಲಿ ಈ ಬಗ್ಗೆ ತಿಳಿವಳಿಕೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಜೊತೆಗೆ ಕಳೆದ ಐದು ವರ್ಷಗಳಲ್ಲಿ ಅಭಿಯಾನದ ವೆಚ್ಚ ಇಳಿಸುತ್ತ ಜನಸ್ಪಂದನೆ ಹೆಚ್ಚಿಸುವ ಅಪರೂಪದ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.
ಅಭಿನವ್ ಬನ್ಸಲ್, ಅಧ್ಯಕ್ಷರು, ಸಿಐಐ ಮಂಗಳೂರು ಜಿಲ್ಲಾ ಘಟಕ, ಮಾತನಾಡಿ, ಮೈಂಡ್‌ಫುಲ್ ಕನ್ಸಲ್ಟಿಂಗ್‌ನ ಈ ಸಾಧನೆ ಮಂಗಳೂರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು, ಪ್ರಾದೇಶಿಕ ಪ್ರತಿಭೆಗೆ ರಾಷ್ಟ್ರೀಯ ವೇದಿಕೆ ಒದಗಿಸುವಲ್ಲಿ ಸಿಐಐಯ ಪಾತ್ರವನ್ನು ಕೂಡ ತೋರಿಸಿದೆ ಎಂದರು.
ಮಂಗಳೂರಿನ ಪ್ರಮುಖ ತಜ್ಞ ವೈದ್ಯರೂ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಡಾ. ಕೃಷ್ಣ ಶರಣ್, ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರು, ರೇಡಿಯೋಥೆರಪಿ ಮತ್ತು ಆಂಕಾಲಜಿ, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಅವರು ಭಾರತದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದ್ದು, ರಾಷ್ಟ್ರೀಯ ಮಟ್ಟದಲ್ಲಿ ತಪಾಸಣೆ ಜಾಗೃತಿ ಮೂಡಿಸಿದ ಮೈಂಡ್‌ಫುಲ್ ಕನ್ಸಲ್ಟಿಂಗ್‌ನ ಪ್ರಯತ್ನ ಶ್ಲಾಘನೀಯ ಎಂದರು.
ಡಾ. ಮನೋಹರ್ ಪೈ, ಪ್ರೊಫೆಸರ್ ಆಫ್ ಸರ್ಜರಿ, ಕೆಎಂಸಿ, ಇವರು ವಿಶ್ವಾಸಾರ್ಹ ಜನಜಾಗೃತಿಕಾರ್ಯಕ್ರಮಗಳ ಮೂಲಕ ಜನರನ್ನು ತಮ್ಮ ಆರೋಗ್ಯ ರಕ್ಷಣೆಗಾಗಿ ನಿಯಮಿತ ತಪಾಸಣೆಗೆ ಪ್ರೇರೇಪಿಸಬಹುದು ಎಂಬುದನ್ನು ಈ ಅಭಿಯಾನ ತೋರಿಸಿದೆ ಎಂದರು.
ಡಾ. ಪ್ರವೀಣ್ ಜಾನ್ ಪ್ರೊಫೆಸರ್ ಆಫ್ ರೇಡಿಯಾಲಜಿ, ಮತ್ತು ಡಾ. ಶ್ರವ್ಯ, ಸ್ತನ ತಪಾಸಣಾ ತಜ್ಞರು, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಇವರುಈ ಪ್ರಶಸ್ತಿ ವಿಜೇತ ಅಭಿಯಾನದ ಮುಖ್ಯ ಸಂದೇಶ ಸರಳ. ಸ್ತನ ಕ್ಯಾನ್ಸರ್ ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಆದರೆ ಬೇಗ ಪತ್ತೆ ಮಾಡಿದರೆ ಗುಣಪಡಿಸಲು ಸಾಧ್ಯ. 40 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ಹೈ ರಿಸ್ಕ್ ಗುಂಪಿನ ಯುವತಿಯರು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಸ್ವಯಂ ಪರೀಕ್ಷೆಯಿಂದ ಆರಂಭಿಕ ಹಂತದ ರೋಗ ಪತ್ತೆಯಾಗದೇ ಹೋಗಬಹುದು. ಆದ್ದರಿಂದ ಅರ್ಹ ಮಹಿಳೆಯರು ವರ್ಷಕ್ಕೊಮ್ಮೆ ಮ್ಯಾಮೋಗ್ರಫಿ ಮಾಡಿಸಿಕೊಳ್ಳಬೇಕು. ಇದು ಸ್ತನ ಕ್ಯಾನ್ಸರ್ ಬೇಗ ಪತ್ತೆ ಮಾಡಲು ಅತ್ಯುತ್ತಮ ಪರೀಕ್ಷೆಯಾಗಿದೆ ಎಂದು ಮನವಿ ಮಾಡಿದರು.

