ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯು IEEE (ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನೀಯರ್ಸ್) ಬೆಂಗಳೂರು ಮತ್ತು ಮಂಗಳೂರು ವಿಭಾಗಗಳ ಸಹಭಾಗಿತ್ವದಲ್ಲಿ “ಹೊಸತಾಗಿ ಬೆಳೆಯುತ್ತಿರುವ ಸಮನ್ವಯ ವಿಜ್ಞಾನ ಮತ್ತು ತಂತ್ರಜ್ಞಾನ” ಗಳ ಕುರಿತು ಆಯೋಜಿಸಿದ ಅಂತರರಾಷ್ಟ್ರೀಯ ಸಮ್ಮೇಳನವನ್ನು (ICESST 2026) ಮಂಗಳೂರಿನ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.

ಭಾರತದ ಖ್ಯಾತ ಅಂತರಿಕ್ಷ ವಿಜ್ಞಾನಿ, ದೇಶದ ಅತ್ಯುನ್ನತ ಅಂತರಿಕ್ಷ ಸಂಸ್ಥೆ “ಇಸ್ರೋ” ಮಾಜಿ ಅಧ್ಯಕ್ಷರು ಹಾಗೂ “ಪದ್ಮಶ್ರೀ” ಪುರಸ್ಕೃತರಾದ ಎ. ಎಸ್. ಕಿರಣ್ ಕುಮಾರ್ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಐಇಇಇ ಮಂಗಳೂರು ಉಪವಿಭಾಗದ ಅಧ್ಯಕ್ಷರಾದ ಡಾ. ವೇಣುಗೋಪಾಲ ಪಿ. ಎಸ್., ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಇಶಾನ್ ರಾವ್, ಮತ್ತು ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಕುಲಸಚಿವರಾದ ಡಾ. ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕುಮಾರ್, ಕಾಲೇಜಿನ ಪ್ರಾಂಶುಪಾಲರು ಹಾಗೂ ಅಂತರರಾಷ್ಟ್ರೀಯ ಸಮ್ಮೇಳನದ ಪ್ರಧಾನ ಮೇಲ್ವಿಚಾರಕರಾದ ಡಾ. ರಾಮಕೃಷ್ಣ ಎನ್ ಹೆಗಡೆ, ಸಂಚಾಲಕರಾದ ಪ್ರೊ. ಗೌರವ್ ಪ್ರಸಾದ್ ಮತ್ತು ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ರಾಮಕೃಷ್ಣ ಎನ್ ಹೆಗಡೆ ಸ್ವಾಗತ ಭಾಷಣವನ್ನು ಮಾಡಿದರು ಹಾಗೂ ಕಳೆದ ಒಂದು ವರ್ಷಗಳಿಂದ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುವಲ್ಲಿ ಮಾಡಿದ ಚಟುವಟಿಕೆಗಳ ಕುರಿತು ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ ರವರು ಈ ಕಾರ್ಯಕ್ರಮವನ್ನು ಆಯೋಜಿಸಲು ನೀಡಿದ ಮಾರ್ಗದರ್ಶನದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಎರಡು ದಿನಗಳ ಕಾಲ ನಡೆಯಲಿರುವ ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ರೋಬೋಟಿಕ್ಸ್ ಹಾಗೂ ಮೂಲಭೂತ ವಿಜ್ಞಾನ ಸೇರಿದಂತೆ ಬಹುಶಾಖೀಯ ವಿಷಯವಲಯಗಳಿಗೆ ಸಂಬಂಧಿಸಿದ 509 ಸಂಶೋಧನಾ ಪ್ರಬಂಧಗಳಲ್ಲಿ ಆಯ್ಕೆ ಮಾಡಲಾದ 152 ಪ್ರಬಂಧಗಳನ್ನು ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಆಗಮಿಸಿರುವ ಉಪನ್ಯಾಸಕರು, ಸಂಶೋಧಕರು, ತಜ್ಞರು ಹಾಗೂ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.
ಐಇಇಇ ಮಂಗಳೂರು ಉಪವಿಭಾಗದ ಅಧ್ಯಕ್ಷರಾದ ಡಾ. ವೇಣುಗೋಪಾಲ ಪಿ. ಎಸ್. ರವರು ಮಾತನಾಡಿ, ಐಇಇಇ ಸಮ್ಮೇಳನದ ಸಮಗ್ರ ಅವಲೋಕನವನ್ನು ನೀಡಿದರು, ಹಾಗೂ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮುಕ್ಕ ಸಂಸ್ಥೆಯನ್ನು ಅಭಿನಂದಿಸಿದರು. ಐಇಇಇ ಸಮ್ಮೇಳನಗಳಲ್ಲಿ ಸಂಶೋಧನಾ ಕಾರ್ಯಗಳ ಗುಣಮಟ್ಟ ಸ್ಪಷ್ಟವಾಗಿ ಪ್ರತಿಬಿಂಬಿತವಾಗುತ್ತದೆ. ಇಂತಹ ಸಮ್ಮೇಳನಗಳು ಸಂಶೋಧನಾ ಕ್ಷೇತ್ರದಲ್ಲಿ ನೀವು ಸಾಧಿಸಿರುವುದನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿವೆ ಎಂದು ತಿಳಿಸಿದರು. ಸಂಶೋಧನೆ ಎಂದರೆ ಎಂದಿಗೂ ಅಂತ್ಯವಿಲ್ಲದ ಪ್ರಕ್ರಿಯೆಯಾಗಿದೆ ಎಂದು ಹೇಳಿದರು. ಜ್ಞಾನ ಹಂಚಿಕೊಳ್ಳುವಿಕೆ ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟ ಅವರು, ಸಮ್ಮೇಳನಕ್ಕೆ ಆಗಮಿಸಿದ ಎಲ್ಲಾ ಪ್ರತಿನಿಧಿಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಮಾತನಾಡಿ, ಗುರುಕುಲ ಶಿಕ್ಷಣ ವ್ಯವಸ್ಥೆಯ ಮಹತ್ವವನ್ನು ವಿವರಿಸಿದರು. ಸಮಾಜದಲ್ಲಿರುವ ಸಮಸ್ಯೆಗಳನ್ನು ಗಮನಿಸಿ, ಗುರುವಿನ ಹಾಗೂ ಮಾರ್ಗದರ್ಶಕರ ಸಹಾಯದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು, ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಹೇಳಿದರು. ಹೊಸತನ (ಇನ್ನೋವೇಷನ್) ಅತ್ಯಂತ ಅಗತ್ಯವೆಂದು ತಿಳಿಸಿದ ಅವರು, ವಿದ್ಯಾರ್ಥಿಗಳು ನಿರಂತರವಾಗಿ ಸಮಸ್ಯೆಗಳ ಅವಲೋಕನ ಮಾಡುತ್ತಾ, ಸೂಕ್ತ ಪರಿಹಾರಗಳನ್ನು ಕಂಡುಕೊಂಡು, ಅದರ ಮಾದರಿಯನ್ನು ಅಭಿವೃದ್ಧಿಪಡಿಸಿ, ಸಮಾಜ ಮತ್ತು ರಾಷ್ಟ್ರದ ಹಿತಕ್ಕಾಗಿ ಉಪಯುಕ್ತ ಉತ್ಪನ್ನಗಳನ್ನು ಸೃಷ್ಟಿಸಬೇಕು ಎಂದು ಅವರು ತಿಳಿಸಿದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ “ಪದ್ಮಶ್ರೀ” ಡಾ. ಎ. ಎಸ್. ಕಿರಣ್ ಕುಮಾರ್ ರವರು ಮಾತನಾಡಿ, ಜಗತ್ತು ಅತ್ಯಂತ ವೇಗವಾಗಿ ರೂಪಾಂತರಗೊಳ್ಳುತ್ತಿದೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಅದೇ ವೇಗದಲ್ಲಿ ಅಭಿವೃದ್ಧಿ ನಡೆಯುತ್ತಿದೆ ಎಂದು ವಿವರಿಸಿದರು. ಮಾನವಕುಲ ತನ್ನ ಅಸ್ತಿತ್ವಕ್ಕಾಗಿ ಹೆಚ್ಚಿನ ಸಾಧನಗಳನ್ನು ಬಳಸಿಕೊಳ್ಳುತ್ತಿದ್ದು, ವ್ಯತ್ಯಯಕಾರಿ ತಂತ್ರಜ್ಞಾನಗಳು ಅಭಿವೃದ್ಧಿಯ ಮೇಲೆ ಮಹತ್ತರ ಪರಿಣಾಮ ಬೀರುತ್ತಿವೆ ಎಂದು ಹೇಳಿದರು. ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಡಾ. ವಿಕ್ರಂ ಸಾರಾಭಾಯ್ ಮತ್ತು ಡಾ. ಹೋಮಿ ಭಾಭಾ ರವರ ಸಾಧನೆಗಳನ್ನು ಸ್ಮರಿಸಿದರು. ರಾಕೆಟ್‌ಗಳು ಮತ್ತು ಉಪಗ್ರಹಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಭಾರತವು ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, 2047ರ ವೇಳೆಗೆ “ವಿಕಸಿತ ಭಾರತ” ಗುರಿಯನ್ನು ಸಾಧಿಸುವತ್ತ ಮುನ್ನಡೆಯುತ್ತಿದೆ ಎಂದು ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವ ಬದುಕನ್ನು ಉಳಿಸಿಕೊಳ್ಳುವುದಕ್ಕೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದಕ್ಕೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಧನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು; ಇಲ್ಲವಾದರೆ ಅವೇ ನಮ್ಮನ್ನು ಪ್ರಭಾವಿತಗೊಳಿಸಬಹುದು ಎಂಬ ಎಚ್ಚರಿಕೆಯನ್ನು ನೀಡಿದರು. ಜಗತ್ತು ನಿರಂತರವಾಗಿ ಹೊಸ ತಂತ್ರಜ್ಞಾನಗಳೊಂದಿಗೆ ಮುಂದುವರಿಯುತ್ತಿರುವುದರಿಂದ, ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಗುರುಕುಲ ವ್ಯವಸ್ಥೆಯ ಮಹತ್ವವನ್ನು ಉಲ್ಲೇಖಿಸಿ, ಜ್ಞಾನವನ್ನು ತಂತ್ರಜ್ಞಾನ ಹಾಗೂ ಉಪಯುಕ್ತ ಸಾಧನಗಳಾಗಿ ಪರಿವರ್ತಿಸುವ ಮೂಲಕ ಪ್ರಸ್ತುತ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಹೇಳಿದರು. ಜ್ಞಾನಾರ್ಜನೆ ಮತ್ತು ನಿರಂತರ ಅಧ್ಯಯನ ಅತ್ಯಂತ ಮುಖ್ಯ, ವೇಗವಾಗಿ ಸಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಬೌದ್ಧಿಕ ಸಾಮರ್ಥ್ಯ ಮತ್ತು ಬುದ್ಧಿವಂತ ವ್ಯವಸ್ಥೆಗಳನ್ನು ನಿರ್ಮಿಸಬೇಕು. ಇತರರ ಜೀವನಮಟ್ಟವನ್ನು ಸುಧಾರಿಸುವತ್ತ ನಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಬೇಕು, ಹಾಗೂ ನಮ್ಮಲ್ಲಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರತಿಷ್ಠಿತವಾಗಿರುವ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿರುವ ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ಅಂತರರಾಷ್ಟ್ರೀಯ ಸಮ್ಮೇಳನದ ಕಾರ್ಯವಿವರ ಸಂಕಲನ (Conference Proceedings) ಪುಸ್ತಕವನ್ನು ಬಿಡುಗಡೆಗೊಳಿಸದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಮಾತನಾಡಿ, ಐಇಇಇ ಸಮ್ಮೇಳನದ ಆಯೋಜಕರನ್ನು ಅಭಿನಂದಿಸಿದರು, ಹಾಗೂ ಮುಖ್ಯ ಅತಿಥಿ “ಪದ್ಮಶ್ರೀ” ಡಾ. ಎ. ಎಸ್. ಕಿರಣ್ ಕುಮಾರ್ ರವರ ಪ್ರಭಾವಶಾಲಿ ಭಾಷಣವನ್ನು ಶ್ಲಾಘಿಸಿದರು. ಇಂದಿನ ಯುಗದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಹೊಸತನ ಮತ್ತು ಜ್ಞಾನವನ್ನು ಪರಿವರ್ತಿಸುವ ಮೂಲಕ ಮಾತ್ರ ಮಾನವ ಜೀವನವನ್ನು ಇನ್ನಷ್ಟು ಸುಧಾರಿತಗೊಳಿಸಬಹುದು ಎಂದು ಅವರು ಹೇಳಿದರು. ಕಳೆದ ಹನ್ನೆರಡು ವರ್ಷಗಳಲ್ಲಿ ಡಿಜಿಟಲ್ ಮಾಧ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿರುವುದನ್ನು ಉಲ್ಲೇಖಿಸಿ, ಇಂದಿನ ದಿನಗಳಲ್ಲಿ ಬೆರಳ ತುದಿಯಲ್ಲಿ ಕ್ಷಣಾರ್ಧದಲ್ಲಿ ಮಾಹಿತಿಯನ್ನು ಪಡೆಯುವ ಸಾಮರ್ಥ್ಯ ನಮಗೆ ದೊರೆತಿದೆ ಎಂದು ತಿಳಿಸಿದರು.
ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಇಂದಿನ ಯುವ ಪೀಳಿಗೆ ಹೆಚ್ಚು ಬುದ್ಧಿವಂತರಾಗಲು ಅವರಿಗೆ ಲಭ್ಯವಾಗುತ್ತಿರುವ ಮಾಹಿತಿಯೇ ಪ್ರಮುಖ ಕಾರಣ ಎಂದು ಹೇಳಿದರು. ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು, ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಪಡೆದ ಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತ್ಯವಶ್ಯಕ. ಕೌಶಲ್ಯಾಧಾರಿತ ಪ್ರಾಯೋಗಿಕ ತರಬೇತಿ ಮತ್ತು ಅನುಭವಗಳು ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಲು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಭವಿಷ್ಯದಲ್ಲಿ ವ್ಯಾಪಾರ ಚಟುವಟಿಕೆಗಳು ಹೊಸ ಆಯಾಮಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಸೂಚಿಸಿ, ಪುರಾಣಗಳಲ್ಲಿ ಉಲ್ಲೇಖಿಸಿರುವ ಸಂಶೋಧನೆ ಮತ್ತು ತಂತ್ರಜ್ಞಾನವು ವಿಜ್ಞಾನಾತ್ಮಕ ಚಿಂತನೆಯ ಪ್ರತಿಫಲವೆಂದು ಹೇಳಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ವಿವಿಧ ನವೀನ ಚಟುವಟಿಕೆಗಳನ್ನು ಅಳವಡಿಸಿಕೊಂಡಿದ್ದು, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ, ಹಿರಿಯ ವಿಜ್ಞಾನಿ, ಡಾ. ಎ. ಎಸ್. ಕಿರಣ್ ಕುಮಾರ್ ರವರು ಮುಂದಿನ ದಿನಗಳಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಮಾರ್ಗದರ್ಶನ ನೀಡುವಂತೆ ವಿನಂತಿಸಿದರು.
ಡಾ. ಸಂಧ್ಯಾ ಶೆಣೈ ಯವರು ಮುಖ್ಯ ಅತಿಥಿ, “ಪದ್ಮಶ್ರೀ” ಡಾ. ಎ. ಎಸ್. ಕಿರಣ್ ಕುಮಾರ್ ರವರನ್ನು ಸಭೆಗೆ ಪರಿಚಯಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ. ರವರು ವಂದನಾರ್ಪಣೆ ಸಲ್ಲಿಸಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಅನಘಾ ಪ್ರಾರ್ಥನೆಯನ್ನು ಮಾಡಿದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಹಾಗೂ ಕೈಗಾರಿಕಾ ಕ್ಷೇತ್ರಗಳಿಂದ ಆಗಮಿಸಿದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

