ಕೋಳಿ ಮನೆಗೆ ಬಂದಿತೆಂದು ಗಲಾಟೆ ; ತಂದೆ-ಮಗಳ ಮೇಲೆ ಹಲ್ಲೆ..!

0
156

ಕೊಪ್ಪ : ಪಕ್ಕದ ಮನೆಯ ಕೋಳಿ ಮನೆಗೆ ಬಂದ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಮಾರಣಾಂತಿಕ ಹಲ್ಲೆಯಾಗಿ ಮಾರ್ಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತುಳುವಿನಕೊಪ್ಪದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಾಳುಗಳನ್ನು ಕೂಲಿ ಕಾರ್ಮಿಕ ಚಂದ್ರು ಹಾಗೂ ಅವರ ಪುತ್ರಿ ಅಶ್ವಿನಿ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಚಂದ್ರು ಅವರ ಸಾಕು ಕೋಳಿಯೊಂದು ಪಕ್ಕದ ಮನೆಯ ನಾಗೇಶ್ ಅವರ ಮನೆಗೆ ಹೋಗಿದ್ದ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. “ನಿನ್ನ ಕೋಳಿ ಯಾಕೆ ನನ್ನ ಮನೆಗೆ ಬರುತ್ತದೆ?” ಎಂದು ನಾಗೇಶ್ ಪ್ರಶ್ನಿಸಿದ್ದು, ತಾನು ಉದ್ದೇಶಪೂರ್ವಕವಾಗಿ ಕೋಳಿಯನ್ನು ಬಿಡಲಿಲ್ಲ ಎಂದು ಚಂದ್ರು ಸಮಾಧಾನಪಡಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಆದರೆ ಮಾತಿನ ಚಕಮಕಿ ತೀವ್ರಗೊಂಡು, ನಾಗೇಶ್ ಹಾಗೂ ಅವರ ಪತ್ನಿ ಚಂದ್ರು ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತಮ್ಮ ಸಾಕು ನಾಯಿಯನ್ನು ಚಂದ್ರು ಅವರ ಮೇಲೆ ಬಿಟ್ಟು ಕಚ್ಚಿಸಿರುವುದಾಗಿ ದೂರಲಾಗಿದೆ.

ಅಪ್ಪನ ಮೇಲಿನ ಹಲ್ಲೆಯನ್ನು ತಡೆಯಲು ಬಂದ ಪುತ್ರಿ ಅಶ್ವಿನಿ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಚಂದ್ರು ಮತ್ತು ಅಶ್ವಿನಿ ಅವರನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಆರೋಪಿಗಳಾದ ನಾಗೇಶ್ ಹಾಗೂ ಅವರ ಪತ್ನಿಯ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here