ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದಿದೆ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ನಿರ್ದೇಶನದಂತೆ, ಮಂಗಳೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ವತಿಯಿಂದ ಜೂನ್ 22ರಂದು ಬೃಹತ್ ಉದ್ಯೋಗ ಹಾಗೂ ಅಪ್ರೆಂಟಿಸ್‌ಶಿಪ್ ಮೇಳವನ್ನು ಆಯೋಜಿಸಲಾಗಿದೆ.
ಮೇಳವು ಬೆಳಗ್ಗೆ 10 ಗಂಟೆಯಿಂದ ಮಂಗಳೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಆವರಣದಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಹಲವು ಪ್ರಮುಖ ಉದ್ಯಮ ಸಂಸ್ಥೆಗಳು ಭಾಗವಹಿಸಲಿವೆ. ವಿವಿಧ ಕಂಪನಿಗಳಲ್ಲಿನ ಖಾಲಿ ಹುದ್ದೆಗಳು ಹಾಗೂ ಅಪ್ರೆಂಟಿಸ್‌ಶಿಪ್ ತರಬೇತಿ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಐಟಿಐ ಕೋರ್ಸ್ ಪೂರ್ಣಗೊಳಿಸಿ ಉತ್ತೀರ್ಣರಾದ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳು ಹಾಗೂ ಅವುಗಳ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

