ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ- ಕಾಸರಗೋಡು ಕರ್ನಾಟಕ ಉತ್ಸವ ಮತ್ತು ಮಹಾಜನ ಆಯೋಗದ ವರದಿ ಕಾಸರಗೋಡು ಕನ್ನಡಿಗರು,
ಗಡಿನಾಡು, ಹೊರನಾಡು ಕನ್ನಡಿಗರು
ಕರ್ನಾಟಕ ಸರಕಾರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದ ಸಿದ್ಧತೆಗಾಗಿ ದುಂಡು ಮೇಜಿನ ಪರಿಷತ್ತು ಚಿಂತನಾ ಸಭೆಗೆ ನಿರ್ಧಾರ –
ಗಡಿನಾಡು ಕಾಸರಗೋಡು ಪ್ರದೇಶದ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಇತಿಹಾಸವನ್ನು ಸಂರಕ್ಷಿಸಿ ಉಳಿಸಿ ಬೆಳೆಸುವ ಕುರಿತು ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಾಧಕರೊಂದಿಗೆ ಸಂವಾದ ಚರ್ಚೆ ನಡೆಸಿ ಕಾಸರಗೋಡು ಕನ್ನಡಿಗರ ಉದ್ಯೋಗ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು ಸಚಿವರು, ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಸರ್ವ ಪಕ್ಷದ ನಾಯಕರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು,ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ,ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕನ್ನಡ ಸಂಘಟನೆಗಳ ಅಧ್ಯಕ್ಷರು ಇವರಲ್ಲಿಗೆ ಕಾಸರಗೋಡು ಕನ್ನಡಿಗರನ್ನೊಳಗೊಂಡು, ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳ ಪ್ರಾತಿನಿಧಿಕವಾದ ಕಾಸರಗೋಡು ಕರ್ನಾಟಕ ಸಂಘಟನೆಗಳಿಂದ ಉನ್ನತ ಮಟ್ಟದ ನಿಯೋಗವನ್ನು ಕೊಂಡೊಯ್ಯಲು ರೂಫುರೇಷೆ ಸಿದ್ದಪಡಿಸಲಾಗುವುದು.
ಉದ್ದೇಶ:- ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡಣಾ ವರದಿ ಹೊರ ಬಿದ್ದಂದಿನಿಂದ ಕಾಸರಗೋಡು ಕನ್ನಡ ಬಂಧುಗಳು ನಡೆಸಿದ ಪ್ರಯತ್ನಗಳು ಸಂಘಟಿಸಿದ ಹೋರಾಟಗಳನ್ನು ಪುನರಾವಲೋಕನ ಮಾಡುವುದರಲ್ಲೇ ಹೊಸ ಬೆಳಕು ಕಾಣಬಹುದು. ಮುಂದಿನ ಹಾದಿಯನ್ನು ಕಂಡುಕೊಳ್ಳಲು ಹಿಂದಿನ ಹೆಜ್ಜೆಗಳತ್ತ ಚಿತ್ತಹರಿಸುವ ಅಗತ್ಯವಿದೆ. ನಮ್ಮ ಕೈ ಬಿಟ್ಟು ಹೋಗಿರುವ ಕನ್ನಡ ಪ್ರದೇಶಗಳನ್ನು ಮರಳಿ ಪಡೆಯಲು ಕರ್ನಾಟಕ ಸರಕಾರ ಅಧಿಕೃತವಾಗಿ ಯಾವುದೇ ಸಂಘಟಿತ ಪ್ರಯತ್ನವನ್ನು ನಡೆಸಿಲ್ಲ ಎಂಬುದು ಭಾಷಾನ್ವಯ ರಾಜ್ಯಗಳನ್ನು ಒಪ್ಪಿರುವ ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ.
ಕನ್ನಡ ಭಾಷೆ,ಸಂಸ್ಕೃತಿಗಳು ಕಾಸರಗೋಡಿನಲ್ಲಿ ವ್ಯಾಪಕವಾಗಿ ಇರುವಷ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲೂ ಇಲ್ಲ ನಡೆ,ನುಡಿ ಸಂಪ್ರದಾಯ ವ್ಯವಹಾರ ಎಲ್ಲದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅವಿನಾಭಾವವಾಗಿ ಬೆಸೆದುಕೊಂಡಿದೆ.
ಗಡಿ ನಾಡಿನಲ್ಲಿ ಭಾಷೆಯ ಸಮಸ್ಯೆ ಮಾತ್ರ ಅಲ್ಲ ಬದುಕಿನ ಸಮಸ್ಯೆಯೂ -ಇದೆ.ಬದುಕಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಭಾಷಾ ಚಳವಳಿಗಳು ಬದುಕಿನ ಚಳವಳಿಯಾಗಬೇಕು ಗಡಿನಾಡಿನ ಜನರು ಪರಕೀಯ ಪ್ರಜ್ಞೆಯಿಂದ ನರಳದೇ ಅವರೂ ಕರ್ನಾಟಕದವರು ಎಂದುಕೊಳ್ಳಲು ಅವರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗ ನೀಡಿ ಅಭಿವೃದ್ಧಿಗೊಳಿಸುವ ತುರ್ತು ಅಗತ್ಯವಿದೆ.
ಕರ್ನಾಟಕದ ಬಹಳಷ್ಟು ಜನರಿಗೆ ಗಡಿವಿವಾದ ಎಂದರೆ ತಟ್ಟನೆ ನೆನಪಾಗುವುದು ಬೆಳಗಾವಿ ಮಾತ್ರ, ಕಾಸರಗೋಡಿನ ಪ್ರಶ್ನೆಯೂ ಇದೆ ಎಂಬುದನ್ನು ಕನ್ನಡಿಗರಿಗೆ ನೆನಪಿಸುವ ಕಾರ್ಯ ಆಂದೋಲನದ ರೂಪದಲ್ಲಿ ನಡೆಯಬೇಕಾಗಿದೆ. ಕಾಸರಗೋಡಿನ ಎಲ್ಲಾ ಕನ್ನಡಪರ ಸಂಘಟನೆಗಳು ಒಂದುಗೂಡಿ, ಕರ್ನಾಟಕದಲ್ಲಿರುವ ಕನ್ನಡಪರ ಸಂಘಟನೆಗಳ ಸಹಕಾರ ಪಡೆದು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ ಸಂಘಟಿಸಬೇಕಾಗಿದೆ.
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ! ಎಂದ ರಾಷ್ಟ್ರಕವಿ ಗೋವಿಂದ ಪೈ,ಬೆಂಕಿ ಬಿದ್ದಿದೆ ಮನೆಗೆ…ಓ ಬೇಗ ಬನ್ನಿ….ಎಂದ ಕಯ್ಯಾರ ಕಿಞ್ಞಣ್ಣರೈ ಅವರುಗಳ ಕರ್ಮಭೂಮಿ ಕಾಸರಗೋಡನ್ನು ಮರಳಿ ಪಡೆಯುವುದು ಕನ್ನಡಿಗರ ಹೊಣೆ ಎಂಬುದನ್ನು ಕನ್ನಡಿಗರ ಮನದಾಳದಲ್ಲಿ ಮೂಡಿಸಬೇಕು ಈ ನಿಟ್ಟಿನಲ್ಲಿ ಕಾಸರಗೋಡು, ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ- ಕಾಸರಗೋಡು ಕರ್ನಾಟಕ ಉತ್ಸವ ಮತ್ತು ಮಹಾಜನ ಆಯೋಗದ ವರದಿ- ಕಾಸರಗೋಡು ಕನ್ನಡಿಗರು,ಗಡಿನಾಡು- ಹೊರನಾಡು ಕನ್ನಡಿಗರು, ಕರ್ನಾಟಕ ಸರಕಾರ – ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸುವ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯದ ವಿವಿಧ ಕನ್ನಡ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು,ಕನ್ನಡ ಚಿಂತಕರು, ಕನ್ನಡ ಹೋರಾಟಗಾರರು, ಸಾಹಿತಿಗಳು, ಮಾಧ್ಯಮದವರು, ಕಲಾವಿದರು ವಿವಿಧ ಕ್ಷೇತ್ರದ ಸಾಂಸ್ಕೃತಿಕ ರಾಯಭಾರಿಗಳು, ಜನ ಪ್ರತಿನಿಧಿಗಳನ್ನೊಳಗೊಂಡು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಕನ್ನಡ ಸಾಂಸ್ಕೃತಿಕ ರಾಯಭಾರಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕಾಸರಗೋಡು ಕರ್ನಾಟಕ ಸಂಘಟನೆಗಳಿಂದ ದುಂಡು ಮೇಜಿನ ಪರಿಷತ್ತು ಚಿಂತನಾ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು.
ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ-ಕಾಸರಗೋಡು ಕರ್ನಾಟಕ ಉತ್ಸವಕ್ಕೆ ನಿರ್ಧಾರ
ಕೇರಳ ಸರಕಾರ ತೆಗೆದುಕೊಂಡಿರುವ ಕನ್ನಡ ವಿರೋಧಿ ನಿಲುವನ್ನು ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಕನ್ನಡ ಸಂಘಟನೆಗಳು ಬಲವಾಗಿ ಖಂಡಿಸುತ್ತದೆ. ಮಹಾಜನ ಆಯೋಗದ ವರದಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ. ಈಗಾಗಲೇ ಈ ಹಿಂದೆ ಇದೇ ಸುಪ್ರೀಂಕೋರ್ಟ್ ಮಹಾಜನ ವರದಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ, ಆಂಧ್ರಪ್ರದೇಶ,ತಮಿಳುನಾಡು ರಾಜ್ಯಗಳಿಗೆ ನಿರ್ದೇಶನ ನೀಡಿರುತ್ತದೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಬಹು ದಿನಗಳಿಂದ ಕಾಸರಗೋಡು ಕನ್ನಡಿಗರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅವರ ತಾಯಿನುಡಿಯಾದ ಕನ್ನಡದ ಮೇಲೆ ಬಲವಂತವಾಗಿ ಮಲಯಾಳಂ ಭಾಷೆ ಹೇರುತ್ತಿರುವ ಕೇರಳ ಸರಕಾರ ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ನ್ಯಾಯಾಂಗ ನಿಂದನೆ ಮಾಡುತ್ತಿದೆ. ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ಕರ್ನಾಟಕ ಸರಕಾರ ಹಾಗೂ ರಾಜ್ಯದ ಕನ್ನಡ ಸಂಘಟನೆಗಳು,ರಾಜಕೀಯ ಪಕ್ಷದ ನಾಯಕರನ್ನು ಕೇಳಿಕೊಳ್ಳಲಾಗುವುದು.
ಕಾಸರಗೋಡಿನಲ್ಲಿ ನಿರಂತರ ಮಲಯಾಳೀಕರಣಗೊಳಿಸುವುದರಿಂದ ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಗೆ,ಅದರ ಬೆಳವಣಿಗೆಗೆ ಭಯದ ವಾತಾವರಣ ಮೂಡಿ ಬರುತ್ತಿದೆ ಒಂದು ಜನಾಂಗದ ಭಾಷೆ ಮತ್ತು ಸಂಸ್ಕೃತಿಯನ್ನು ಬಲವಂತವಾಗಿ ಮುಗಿಸುವ ಸಂಚು, ರೂಪಿಸಿರುವ ಕೇರಳ ಸರಕಾರ ತನ್ನ ನಿರ್ಧಾರದಿಂದ ಈ ಕೂಡಲೇ ಹಿಂದೆ ಸರಿಯಬೇಕು ಮತ್ತು ಮಹಾಜನ ಆಯೋಗದ ವರದಿಯ ಅಂತಿಮ ತೀರ್ಪು ಹೊರಬರುವ ವರೆಗೂ ಕಾಸರಗೋಡಿನಲ್ಲಿ ಮಲಯಾಳಂ ಭಾಷಾ ಮಾಧ್ಯಮ ಬಲವಂತವಾಗಿ ಹೇರುವ ಕೆಲಸ ಯಾವುದೇ ಕಾರಣಕ್ಕೂ ಮಾಡಬಾರದು. ಕಾಸರಗೋಡು ಕನ್ನಡಿಗರ ನೋವಿಗೆ ಧ್ವನಿಯಾಗಿ ನಿಂತು ಕಾಸರಗೋಡಿನ ಕನ್ನಡ ಹೋರಾಟಕ್ಕೆ ಕರ್ನಾಟಕ ರಾಜ್ಯದ ಕನ್ನಡ ಸಂಸ್ಕೃತಿ ಸಂಘಟನೆಗಳು, ರಾಜಕೀಯ ಪಕ್ಷಗಳು ಮುಂದಿನ ಎಲ್ಲಾ ದಿನಗಳಲ್ಲಿ ಬೆಂಬಲವಾಗಿ ನಿಲ್ಲುತ್ತದೆ ಹಾಗೂ ಕಾಸರಗೋಡು ವಿಲೀನೀಕರಣ, ಕನ್ನಡ ಸಮಸ್ಯೆಗಳು,ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳು,ಕನ್ನಡ ಸಂಘಟನೆಗಳ ಹೋರಾಟಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲಿ ಉನ್ನತಮಟ್ಟದ ನಿಯೋಗವೊoದನ್ನು ರಚಿಸಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳು,ಗೃಹ ಸಚಿವರು, ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರನ್ನು ಭೇಟಿಯಾಗಿ ಕಾಸರಗೋಡು ಕನ್ನಡಿಗರ ಹೋರಾಟಕ್ಕೆ ಕರ್ನಾಟಕ ಸರಕಾರ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಗುವುದು.
ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು, ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರನ್ನು ಕಾಸರಗೋಡು ವಿಷಯದಲ್ಲಿ ಕೇಂದ್ರ ಲೋಕಸಭಾ ಅಧಿವೇಶನ,ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾವನೆಯೊಂದಿಗೆ ಚರ್ಚಿಸಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು.ಕರ್ನಾಟಕ ರಾಜ್ಯದ ಎಲ್ಲಾ ಗಡಿನಾಡು ಹೊರನಾಡು ಪ್ರದೇಶಗಳಲ್ಲಿರುವ ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾಸರಗೋಡು ಕರ್ನಾಟಕದ ಪ್ರಮುಖ ಸಾಹಿತಿಗಳು, ಹೋರಾಟಗಾರರು,ಕನ್ನಡಪರ ಚಿಂತಕರು, ಮಾಧ್ಯಮದವರು, ಕಲಾವಿದರು, ಚಲನಚಿತ್ರ ನಟರು,ನಿರ್ದೇಶಕರು, ಕಾಸರಗೋಡು ಕರ್ನಾಟಕ ರಾಜ್ಯದ ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳ ಬೆಂಬಲ ಪಡೆದು ಕಾಸರಗೋಡು,ಹಾಗೂ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ- ಕಾಸರಗೋಡು ಕರ್ನಾಟಕ ಉತ್ಸವವನ್ನು ಶೀಘ್ರದಲ್ಲೇ ಏರ್ಪಡಿಸಲಾಗುವುದು.
ಗಡಿನಾಡು ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ಅವುಗಳ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದು ಮತ್ತು ಅವರೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುವುದಕ್ಕಾಗಿ ಕಾಸರಗೋಡು ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಕಾಸರಗೋಡು ಕರ್ನಾಟಕ ರಾಜ್ಯದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ಅಭಿಪ್ರಾಯಗಳನ್ನು ಸಂಬಂಧಪಟ್ಟವರಿಗೆ ನೀಡಬೇಕಾಗಿದೆ. ಕರ್ನಾಟಕ ರಾಜ್ಯದಾದ್ಯoತ “ಕಾಸರಗೋಡು ನಮ್ಮದು” ಎಂಬ ಘೋಷಣೆಯನ್ನು ಮಾಡಲಾಗುವುದು. ಕಾಸರಗೋಡು ಗಡಿ ಪ್ರದೇಶಗಳ ಸ್ಥಿತಿ ಗತಿ,ಶಿಕ್ಷಣ, ಮಾಧ್ಯಮ ಮತ್ತು ನ್ಯಾಯಾಲಯದ ತೀರ್ಪುಗಳು, ಕನ್ನಡಿಗರ ಜ್ವಲಂತ ಸಮಸ್ಯೆಗಳು, ಉದ್ಯೋಗ ನೀತಿಗಳು ಕುರಿತು ಸಮಗ್ರವಾದ ಅಧ್ಯಯನ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಮತ್ತು ಕೇರಳ, ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಗಳು ಮತ್ತು ಕರ್ನಾಟಕ ಸರಕಾರದ ಸಚಿವರು,ಲೋಕಸಭಾ ಸದಸ್ಯರು,ಶಾಸಕರ ಗಮನ ಸೆಳೆಯಲು ಪ್ರಯತ್ನಿಸಲಾಗುವುದು. ಕಾಸರಗೋಡು- ಸಮ್ಮೇಳನಕ್ಕೆ ಕರ್ನಾಟಕದ ನೆರೆ ರಾಜ್ಯಗಳಾದ ಮಹಾರಾಷ್ಟ್ರದ ಸೋಲಾಪುರ,ಜತ್ತ, ಅಕ್ಕಲಕೋಟೆ, ಆಂಧ್ರಪ್ರದೇಶದ ಅಧೋನಿ, ಮಡಕಶಿರಾ, ಕಲ್ಯಾಣದುರ್ಗ, ರಾಯದುರ್ಗ,ತೆಲಂಗಾಣ, ತಮಿಳುನಾಡಿನ ಊಟಿ,ಹೊಸೂರು ಗಡಿ ಭಾಗದಿಂದ ಸಾಹಿತಿಗಳು, ಕನ್ನಡ ಚಿಂತಕರು,ಕನ್ನಡ ಹೋರಾಟಗಾರರು, ಮಾಧ್ಯಮದವರು, ಅಧ್ಯಾಪಕರು ಹಾಗೂ ಕರ್ನಾಟಕ ರಾಜ್ಯದ ಗಡಿ ಪ್ರದೇಶದಲ್ಲಿರುವ ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಆಮಂತ್ರಿಸಲಾಗುವುದು.
ಬೆಂಗಳೂರಿನಲ್ಲಿ ಕರ್ನಾಟಕ ಗಡಿನಾಡು ಹೊರನಾಡು ಕನ್ನಡಿಗರ ಮ್ಯೂಸಿಯಂ, ಹಾಗೂ ಕರ್ನಾಟಕ ಗಡಿನಾಡು ಹೊರನಾಡು ಭವನ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ 25 ಕೋಟಿ ಅನುದಾನಕ್ಕೆ ಮನವಿ
ಕರ್ನಾಟಕ ಸರಕಾರವು ಬೆಂಗಳೂರಿನಲ್ಲಿ ಗಡಿನಾಡು ಹೊರನಾಡು ಕನ್ನಡಿಗರ ಮ್ಯೂಸಿಯಂ ಮತ್ತು ಅಂತರರಾಜ್ಯದ ಕುರಿತು ಪ್ರತ್ಯೇಕವಾಗಿ ಅಧ್ಯಯನ ನಡೆಸಲು ಕರ್ನಾಟಕ ಗಡಿನಾಡು- ಹೊರನಾಡು ಕನ್ನಡಿಗರ ತಜ್ಞರ ಸಲಹಾ ಸಮಿತಿ ರಚಿಸಬೇಕು. ಕರ್ನಾಟಕ ರಾಜ್ಯದ ಗಡಿನಾಡು ಹೊರನಾಡು ಕನ್ನಡಿಗರಿಗೆ ಸಂಬಂಧಪಟ್ಟ ದಾಖಲೆ ಪತ್ರಗಳು,ಹಸ್ತ ಪ್ರತಿಗಳು, ವಿವಿಧ ಆಯೋಗದ ವರದಿಗಳು, ಕೇರಳ,ಕರ್ನಾಟಕ ಮಹಾರಾಷ್ಟ್ರ,ತಮಿಳುನಾಡು, ಆಂಧ್ರಪ್ರದೇಶ,ತೆಲಂಗಾಣ, ಗೋವಾ ರಾಜ್ಯಗಳ ಕನ್ನಡಿಗರಿಗೆ ಸಂಬಂಧ ಪಟ್ಟ ಕರ್ನಾಟಕ ಸರಕಾರದ ಪತ್ರ ವ್ಯವಹಾರದ ದಾಖಲೆ ಪತ್ರಗಳನ್ನು ಡಿಜಿಟಲ್ ದಾಖಲೆಯನ್ನಾಗಿ ಪರಿವರ್ತಿಸಿ ಆಧುನಿಕ ತಂತ್ರಜ್ಞಾನದ ಮೂಲಕ ಡಿಜಿಟಲೀಕರಣಗೊಳಿಸಬೇಕಾಗಿದೆ.ಎಲ್ಲಾ ದಾಖಲೆ ಪತ್ರಗಳನ್ನು ವೆಬ್ ಸೈಟ್, ಕಂಪ್ಯೂಟರ್ ನಲ್ಲಿ ಸಂಗ್ರಹಿಸಿಡುವ ಉದ್ದೇಶದಿಂದ ಕರ್ನಾಟಕ ಸರಕಾರದ ಕರ್ನಾಟಕ ಗಡಿ ಸಲಹಾ ಸಮಿತಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರು,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಜೆಟಿಯಲ್ ಇಲಾಖೆ, ಕರ್ನಾಟಕ ಪತ್ರಗಾರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಗ್ರಂಥಾಲಯ ಇಲಾಖೆಯ ಆಯುಕ್ತರು, ನಿರ್ದೇಶಕರು, ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆರು ರಾಜ್ಯಗಳ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಪ್ರತಿನಿಧಿಗಳನ್ನೊಳಗೊಂಡ, ಪ್ರತ್ಯೇಕ ಅಸ್ತಿತ್ವವುಳ್ಳ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಉನ್ನತಮಟ್ಟದ ತಜ್ಞರ ಸಲಹಾ ಸಮಿತಿ ಅಥವಾ ಶಾಶ್ವತವಾದ ಕರ್ನಾಟಕ ಗಡಿನಾಡು ಹೊರನಾಡು ಕನ್ನಡಿಗರ ಆಯೋಗವನ್ನು ರಚಿಸಬೇಕು. ಈ ಐದು ರಾಜ್ಯಗಳ ಗಡಿನಾಡು- ಹೊರನಾಡುಗಳ ಸಮಗ್ರ ಮಾಹಿತಿಯನ್ನೊಳಗೊಂಡ ರೆಫರೆನ್ಸ್ ಮ್ಯೂಸಿಯಂವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರ್ನಾಟಕ ಸರಕಾರ ಬೆಂಗಳೂರು ಇದರ ಕನ್ನಡ ಭವನದಲ್ಲಿ ಕರ್ನಾಟಕ ಗಡಿನಾಡು ಹೊರನಾಡು ಭವನವನ್ನು ಸ್ಥಾಪಿಸಲು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸರಕಾರದ ನಿವೇಶನದಲ್ಲಿ ಕರ್ನಾಟಕ ಗಡಿನಾಡು -ಹೊರನಾಡು ಭವನವನ್ನು ನಿರ್ಮಾಣ ಮಾಡಲು ಕರ್ನಾಟಕ ಸರಕಾರವು ಮುಂದಿನ ಬಜೆಟ್ ನಲ್ಲಿ 25 ಕೋಟಿ ರೂಪಾಯಿ ಮೊತ್ತದ ವಿಶೇಷ ಅನುದಾನವನ್ನು ಮಂಜೂರು ಮಾಡಲು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ನೇತೃತ್ವದಲ್ಲಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಕಾಸರಗೋಡು ಕರ್ನಾಟಕ ಸಂಘಟನೆಯ ಶಿವರಾಮ ಕಾಸರಗೋಡು ಸಂಸ್ಥಾಪಕ ಅಧ್ಯಕ್ಷರಾಗಿರುವ ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 7 ಮತ್ತು 8ರಂದು ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ – 2026 ಮತ್ತು ಕೇರಳ -ಕರ್ನಾಟಕ ಉತ್ಸವ, ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವ, ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲಾ,ಕಾಲೇಜು, ಸರಕಾರಿ ಕಚೇರಿ,ಗ್ರಾಮ ಪಂಚಾಯಿತು, ನಗರಸಭೆಯಲ್ಲಿ ಕನ್ನಡ ಕಲಿಕಾ ಕೇಂದ್ರವನ್ನು ಕರ್ನಾಟಕ ಸರಕಾರದ ಸಹಕಾರದೊಂದಿಗೆ ಪ್ರಾರಂಭಿಸಲಾಗುವುದು.
ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- 2026 ಮತ್ತು ಕೇರಳ- ಕರ್ನಾಟಕ ಉತ್ಸವ, ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವದ ಯಶಸ್ವಿ ಸಂಘಟನೆಗೆ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರಿಂದ 50 ಲಕ್ಷ ರೂಪಾಯಿ ಮೊತ್ತದ ವಿಶೇಷ ಅನುದಾನವನ್ನು ಮಂಜೂರು ಮಾಡಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ “ಕೇರಳ -ಕರ್ನಾಟಕ ಭವನ” ಸಾಂಸ್ಕೃತಿಕ ಸಮುಚ್ಛಯಕ್ಕೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರಿಂದ ಶಿಲಾನ್ಯಾಸವನ್ನು ನೆರವೇರಿಸಲು ತೀರ್ಮಾನಿಸಲಾಗಿದೆ.

