ಬೈಕ್ ರೈಡ್‌ಗೆ ಕರೆದು ಭೀಕರ ಕೃತ್ಯ; ಪ್ರೇಯಸಿಯನ್ನೇ ಕೊಂದ ಪಾಪಿ ಪ್ರೇಮಿ..!

0
30

ಭುವನೇಶ್ವರ : ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಯನ್ನು ಪ್ರಿಯಕರನೇ ಸೇತುವೆಯಿಂದ ತಳ್ಳಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಳಿಕ ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರೂ, ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ.

ಮೃತ ಯುವತಿಯನ್ನು ಅಂಬಿಕಾ ಎಂದು ಗುರುತಿಸಲಾಗಿದ್ದು, ಆರೋಪಿ ರಾಕೇಶ್ ಆಚಾರ್ಯನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ರಾಕೇಶ್ ಮತ್ತು ಅಂಬಿಕಾ ದೀರ್ಘಕಾಲದಿಂದ ಪ್ರೀತಿಸುತ್ತಿದ್ದರು. ಪಿಯುಸಿ ಪೂರ್ಣಗೊಳಿಸಿದ್ದ ಅಂಬಿಕಾ ವೈದ್ಯೆಯಾಗುವ ಕನಸಿನೊಂದಿಗೆ ಬೆಹರಾಂಪುರದಲ್ಲಿ ನೆಲೆಸಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಇದೇ ವೇಳೆ ಇಬ್ಬರೂ ಮದುವೆಯಾಗಬೇಕು ಎಂದು ಅಂಬಿಕಾ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ.

ಆದರೆ ಮದುವೆಯ ಜವಾಬ್ದಾರಿ ಹೊರುವ ಇಚ್ಛೆ ಇಲ್ಲದ ರಾಕೇಶ್, ಆಕೆಯನ್ನು ಶಾಶ್ವತವಾಗಿ ದೂರ ಮಾಡುವ ಸಂಚು ರೂಪಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಜೂನ್ 7ರಂದು ಅಂಬಿಕಾಳನ್ನು ಗೋಪಾಲಪುರಕ್ಕೆ ಕರೆದೊಯ್ದಿದ್ದ ರಾಕೇಶ್, ದಿನವಿಡೀ ಆಕೆಯೊಂದಿಗೆ ಸಮಯ ಕಳೆದಿದ್ದಾನೆ. ಬಳಿಕ ರಾತ್ರಿ ಇಬ್ಬರೂ ಬೈಕ್‌ನಲ್ಲಿ ಹಿಂದಿರುಗುವ ವೇಳೆ ಅಂಕುಲಿ ಮೇಲ್ಸೇತುವೆ ಬಳಿ ವಾಹನ ನಿಲ್ಲಿಸಿ, ಅಂಬಿಕಾಳನ್ನು ಏಕಾಏಕಿ ಸೇತುವೆಯಿಂದ ಕೆಳಕ್ಕೆ ತಳ್ಳಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಘಟನೆಯ ಬಳಿಕ ಇದು ರಸ್ತೆ ಅಪಘಾತ ಎಂದು ನಂಬಿಸಲು ಆರೋಪಿ ನಾಟಕವಾಡಿದ್ದಾನೆ. ಅಂಬಿಕಾ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರಿಗೂ ಆತನೇ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಆದರೆ ರಾಕೇಶ್ ನೀಡುತ್ತಿದ್ದ ಮಾಹಿತಿ ಮತ್ತು ಘಟನಾ ಪರಿಸ್ಥಿತಿಗಳ ನಡುವೆ ವ್ಯತ್ಯಾಸ ಕಂಡುಬಂದ ಕಾರಣ ಅಂಬಿಕಾಳ ಸಂಬಂಧಿಕರಿಗೆ ಅನುಮಾನ ಮೂಡಿದೆ. ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿ ಹಾಗೂ ಸ್ಥಳದಲ್ಲಿನ ಸಾಕ್ಷ್ಯಾಧಾರಗಳ ಆಧಾರದಲ್ಲಿ ಇದು ಅಪಘಾತವಲ್ಲ, ಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ರಾಕೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಇದೀಗ ಆತ ಪೊಲೀಸರ ವಶದಲ್ಲಿದ್ದಾನೆ.

LEAVE A REPLY

Please enter your comment!
Please enter your name here