ಮಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ರಾಜ್ಯಾದ್ಯಂತ ಅಕ್ಕಿ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಗ್ರಾಹಕರು ಪ್ರತಿ ಕೆಜಿಗೆ ₹6ರಿಂದ ₹10ರವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಕ್ಕಿಗಳ ಬೆಲೆ ಹೆಚ್ಚಳವಾಗಿದ್ದು, 25ರಿಂದ 26 ಕೆಜಿ ತೂಕದ ಅಕ್ಕಿ ಚೀಲಗಳ ಬೆಲೆಯಲ್ಲಿ ಸುಮಾರು ₹150ರವರೆಗೆ ಏರಿಕೆ ದಾಖಲಾಗಿದೆ. ಇದರಿಂದ ಮಧ್ಯಮ ವರ್ಗ ಹಾಗೂ ಸಾಮಾನ್ಯ ಕುಟುಂಬಗಳ ಅಡುಗೆ ಮನೆಯ ಬಜೆಟ್ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ವ್ಯಾಪಾರಿಗಳ ಪ್ರಕಾರ, ಅಕ್ಕಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರೈಕೆ ಪ್ರಮಾಣ ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕೇಂದ್ರ ಸರ್ಕಾರ ಅಕ್ಕಿ ರಫ್ತಿಗೆ ಅವಕಾಶ ನೀಡಿರುವ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆಯಾಗಿದ್ದು, ಅದರ ಪರಿಣಾಮವಾಗಿ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಮಾರುಕಟ್ಟೆ ಮೂಲಗಳ ಪ್ರಕಾರ, ಅಕ್ಕಿ ಕೊರತೆಯ ಪರಿಸ್ಥಿತಿ ಮುಂದಿನ ನವೆಂಬರ್‌ವರೆಗೂ ಮುಂದುವರಿಯುವ ಸಾಧ್ಯತೆ ಇದ್ದು, ಬೆಲೆಗಳು ಇನ್ನಷ್ಟು ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ.
ಜಾಗತಿಕ ಬೆಳವಣಿಗೆಗಳ ಪ್ರಭಾವ
ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಅಕ್ಕಿ ದರದಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬರುತ್ತಿತ್ತು. ಆದರೆ ಈ ಬಾರಿ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಸೇರಿದಂತೆ ಜಾಗತಿಕ ಬೆಳವಣಿಗೆಗಳು ಸರಕು ಸಾಗಣೆ ಮತ್ತು ಪೂರೈಕೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿವೆ. ಇದರ ಪರಿಣಾಮ ಅಕ್ಕಿ ದರವೂ ಏರಿಕೆಯ ಹಾದಿ ಹಿಡಿದಿದೆ.
ಯಾವ ಅಕ್ಕಿಗೆ ಎಷ್ಟು ದರ ಹೆಚ್ಚಳ?
- ಸೋನಾ ಸ್ಟೀಮ್ ರೈಸ್: ₹43 ರಿಂದ ₹49ಕ್ಕೆ ಏರಿಕೆ
- ಸೋನಾ ರಾ ರೈಸ್: ₹52 ರಿಂದ ₹59ಕ್ಕೆ ಏರಿಕೆ
- ಇತರೆ ಹಲವು ಜನಪ್ರಿಯ ಅಕ್ಕಿ ತಳಿಗಳ ಬೆಲೆಯಲ್ಲೂ ಗಮನಾರ್ಹ ಹೆಚ್ಚಳ
ಅಕ್ಕಿ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮ, ಆಹಾರ ಸಂಸ್ಕರಣಾ ಘಟಕಗಳು ಹಾಗೂ ಸಾಮಾನ್ಯ ಗ್ರಾಹಕರ ಮೇಲೂ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.

