ಸಿದ್ದರಾಮಯ್ಯ ಪದತ್ಯಾಗದ ಸುಳಿವು..! ಡಿಕೆ ಶಿವಕುಮಾರ್‌ಗೆ ಸಿಎಂ ಕುರ್ಚಿ?

0
26

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಸಾಧ್ಯತೆಗಳ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ನಡೆದ ಸರಣಿ ಸಭೆಗಳ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

ಹೈಕಮಾಂಡ್‌ ಸೂಚನೆಯಂತೆ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬೆನ್ನಲ್ಲೇ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಕೂಡ ಆಗಮಿಸುವ ನಿರೀಕ್ಷೆಯಿದೆ.

ಕಾವೇರಿ ನಿವಾಸದಲ್ಲಿ ಮಹತ್ವದ ಸಭೆ

ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರೊಂದಿಗೆ ಉಪಾಹಾರ ಕೂಟ ನಡೆಸಿದ್ದು, ತಮ್ಮ ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಸಚಿವರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ರಾಜೀನಾಮೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, “ನಾಳೆ ಮಾತನಾಡುತ್ತೇನೆ” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದ್ದರು.

ಶಾಸಕರಿಗೆ ಬೆಂಗಳೂರಿಗೆ ಬುಲಾವ್

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಶಾಸಕರಿಗೆ ತುರ್ತು ಸಂದೇಶ ರವಾನಿಸಲಾಗಿದ್ದು, ಬಹುತೇಕ ಶಾಸಕರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್‌ ಸೂಚನೆ ನೀಡಿದೆ ಎನ್ನಲಾಗಿದೆ.

“ಹೈಕಮಾಂಡ್‌ ತೀರ್ಮಾನದಂತೆ ನಡೆಯಲಿದೆ” ಎಂಬ ಒಂದೇ ಸಾಲಿನ ಪ್ರತಿಕ್ರಿಯೆಯನ್ನು ನಾಯಕರು ನೀಡುತ್ತಿದ್ದಾರೆ.

ಹೊಸ ಸಂಪುಟಕ್ಕೂ ಬ್ಲೂಪ್ರಿಂಟ್‌ ರೆಡಿ?

ಹೊಸ ಮುಖ್ಯಮಂತ್ರಿ ಆಯ್ಕೆಯೊಂದಿಗೆ ಸಂಪುಟ ಪುನರ್‌ರಚನೆಯೂ ನಡೆಯುವ ಸಾಧ್ಯತೆ ಇದೆ. ಸಾಮಾಜಿಕ ಹಾಗೂ ಪ್ರಾದೇಶಿಕ ಸಮೀಕರಣದ ಆಧಾರದ ಮೇಲೆ ಹೊಸ ಸಚಿವ ಸಂಪುಟ ರಚನೆಗೆ ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೆಲ ಹಿರಿಯ ಸಚಿವರಿಗೆ ಕೊಕ್‌ ನೀಡಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳೂ ಚರ್ಚೆಯಾಗುತ್ತಿವೆ. ಮೊದಲ ಬಾರಿಗೆ ಶಾಸಕರಾದ ಕೆಲವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯೂ ಇದೆ.

ಡಿಕೆಶಿ ಫ್ರಂಟ್‌ರನ್ನರ್‌?

ಪ್ರಸ್ತುತ ಬೆಳವಣಿಗೆಗಳ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ಕಾಂಗ್ರೆಸ್‌ ಹೈಕಮಾಂಡ್‌ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಮುಂದಿನ ಕೆಲ ದಿನಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here