10 ಕೆಜಿ ತೂಕದ ಬೃಹತ್ ಹೆಬ್ಬಾವು ಪತ್ತೆ

0
3

ಕುಂದಾಪುರ : ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕೋಟೆಗುಡ್ಡೆ ಲೈಟ್‌ಹೌಸ್ ಸಮೀಪ ಭಾನುವಾರ ರಾತ್ರಿ ಸುಮಾರು 8.30ರ ವೇಳೆಗೆ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಉರಗ ತಜ್ಞರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ನಡೆಸಿದ ಕಾರ್ಯಾಚರಣೆಯಲ್ಲಿ ಅದನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.

ಬೈಣಿ ನಾಗರಾಜ್ ಖಾರ್ವಿ ಹಾಗೂ ಮಹೇಶ್ ಖಾರ್ವಿ ನಡೆದುಕೊಂಡು ಬರುತ್ತಿದ್ದ ವೇಳೆ ರಸ್ತೆ ಮಧ್ಯೆ ಹೆಬ್ಬಾವು ಕಂಡುಬಂದಿದೆ. ಕೂಡಲೇ ಅವರು ಉರಗ ತಜ್ಞ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮಡಿ ನಾಗರಾಜ್ ಖಾರ್ವಿ ಮತ್ತು ಗಣೇಶ್ ಖಾರ್ವಿ ಅವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡ, ಈ ವೇಳೆಗೆ ಗಿಡಗಂಟೆಗಳೊಳಗೆ ಸೇರಿಕೊಂಡಿದ್ದ ಹೆಬ್ಬಾವನ್ನು ಸತತ ಶೋಧ ಕಾರ್ಯಾಚರಣೆಯ ಬಳಿಕ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು.

ಸೆರೆಹಿಡಿದ ಹೆಬ್ಬಾವಿನ ತೂಕ ಸುಮಾರು 10 ಕೆಜಿ ಇರಬಹುದೆಂದು ಅಂದಾಜಿಸಲಾಗಿದ್ದು, ಮರುದಿನ ಬೆಳಿಗ್ಗೆ ಸಂಬಂಧಿತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉರಗ ತಜ್ಞ ಮಡಿ ನಾಗರಾಜ್ ಖಾರ್ವಿ, ಇತ್ತೀಚಿನ ದಿನಗಳಲ್ಲಿ ಹೆಬ್ಬಾವುಗಳ ಜೊತೆಗೆ ನಾಗರಹಾವು, ಕೆರೆಹಾವು ಹಾಗೂ ಅತ್ಯಂತ ವಿಷಕಾರಿ ಕೊಳಕು ಮಂಡಲ ಹಾವುಗಳು ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಕತ್ತಲ ಪ್ರದೇಶಗಳಲ್ಲಿ ಸಂಚರಿಸುವ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ರಕ್ಷಣೆ ಕಾರ್ಯಾಚರಣೆಯ ವೇಳೆ ಲೈಟ್‌ಹೌಸ್ ವಠಾರದ ಯುವಕರು ಸಹಕಾರ ನೀಡಿದರು. ಸೆರೆಹಿಡಿದ ಹೆಬ್ಬಾವನ್ನು ಸುರಕ್ಷಿತವಾಗಿ ಸಾಗಿಸಲು ವನ್ಯಜೀವಿ ಸಂರಕ್ಷಕರಾದ ದಾಸ ಆಚಾರಿ ಹಾಗೂ ಸಂದೀಪ್ ಪೂಜಾರಿ ಸಹ ನೆರವಾದರು.