ಖಾಕಿಯೊಳಗಿನ ಗಾನಯೋಗಿ – ಕರ್ತವ್ಯದ ಜೊತೆ ಕಲೆಯ ಸಂಗಮವಾದ ಸುಬ್ರಾಯ

0
6

ಬೆಳ್ಳಾರೆ : ನಾಡಿನ ರಕ್ಷಣೆಗಾಗಿ ಕಳೆದ 30 ವರ್ಷಗಳಿಂದ ಖಾಕಿ ಧರಿಸಿ, ಹಗಲು-ರಾತ್ರಿ ಎನ್ನದೆ ದುಡಿಯುತ್ತಿರುವ ಪೊಲೀಸ್ ಅಧಿಕಾರಿ ಸುಬ್ರಾಯ ಅವರ ಪರಿಚಯ ಇಂದು ಕೇವಲ ಪೊಲೀಸ್ ಠಾಣೆಗೆ ಸೀಮಿತವಾಗಿಲ್ಲ. ಅವರು ಇಂದು ಕಲಾ ಪ್ರಪಂಚದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಪೊಲೀಸ್ ಎಂದರೆ ಸಾಮಾನ್ಯವಾಗಿ ಕಠಿಣ ಮನಸ್ಸು, ಶಿಸ್ತು, ಲಾಠಿ, ಕಾನೂನು ಎಂಬ ಭಾವನೆ ಜನರಲ್ಲಿ ಇರುತ್ತದೆ. ಆದರೆ ಸುಬ್ರಾಯ ಅವರ ವ್ಯಕ್ತಿತ್ವ ಇದಕ್ಕೆ ತದ್ವಿರುದ್ಧ. ಕರ್ತವ್ಯದಲ್ಲಿ ಎಷ್ಟು ಅಚ್ಚುಕಟ್ಟು, ಕಟ್ಟುನಿಟ್ಟು, ಹೃದಯದಲ್ಲಿ ಅಷ್ಟೇ ಮೃದುತ್ವ, ಸಂಗೀತದ ಬಗ್ಗೆ ಅಪಾರ ಪ್ರೀತಿ. ಕರ್ತವ್ಯ ಮುಗಿಸಿ ಮನೆಗೆ ಬಂದರೂ, ಅವರ ದಿನ ಮುಗಿಯುವುದು ಒಂದು ಸುಂದರ ಹಾಡಿನೊಂದಿಗೆ.

ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ಪೊಲೀಸ್ ವೃತ್ತಿಗೆ ಸೇರಿದ ನಂತರವೂ ತಮ್ಮ ಕಲೆಯನ್ನು ಮರೆತಿಲ್ಲ. ಬದಲಾಗಿ, ಖಾಕಿಯ ಒತ್ತಡದ ಬದುಕಿನಲ್ಲೇ ಸಂಗೀತವನ್ನು ತಮ್ಮ ಒತ್ತಡ ನಿವಾರಣೆಯ ಮಾರ್ಗವನ್ನಾಗಿ ಮಾಡಿಕೊಂಡಿದ್ದಾರೆ.

ಸ್ವಂತ ಸಾಹಿತ್ಯ, ಸ್ವಂತ ಧ್ವನಿ – “ಜನ ಸೇವಕ” ಹಾಡಿನ ಹಿಂದಿನ ಕಥೆ

ಸುಬ್ರಾಯ ಅವರು ಕೇವಲ ಹಾಡುಗಾರರಲ್ಲ, ಒಬ್ಬ ಸಾಹಿತಿಯೂ ಹೌದು. ತಮ್ಮ ಪೊಲೀಸ್ ಸೇವಾ ಅವಧಿಯಲ್ಲಿ ಕಂಡ ಜನರ ಕಷ್ಟ, ಸುಖ, ಸಮಾಜದ ನೋವು, ನಲಿವುಗಳನ್ನು ಅವರು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅದರ ಫಲವೇ 2023ರಲ್ಲಿ ಬಿಡುಗಡೆಯಾದ “ಜನ ಸೇವಕ” ಹಾಡು. ಈ ಹಾಡಿನ ಸಾಹಿತ್ಯ, ರಾಗ ಸಂಯೋಜನೆ ಮತ್ತು ಗಾಯನ ಎಲ್ಲವೂ ಅವರದೇ. ಒಬ್ಬ ಪೊಲೀಸ್ ಅಧಿಕಾರಿಯಾಗಿ ಜನರ ಸೇವೆ ಮಾಡುವಾಗ ಅನುಭವಿಸಿದ ಭಾವನೆಗಳೇ ಈ ಹಾಡಿನ ಜೀವಾಳ. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರ ಮೆಚ್ಚುಗೆ ಗಳಿಸಿ, ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ

ಇಂದು ರಾಜ್ಯದ ಹಲವಾರು ಪ್ರತಿಷ್ಠಿತ ಸಂಸ್ಥೆಗಳು, ಕನ್ನಡ ಸಂಘಟನೆಗಳು, ಸಂಗೀತ ಬಳಗಗಳು ತಮ್ಮ ಫೇಸ್‌ಬುಕ್ ಲೈವ್ ಕಾರ್ಯಕ್ರಮಗಳಿಗೆ ಸುಬ್ರಾಯ ಅವರನ್ನೇ ಕರೆಸಿಕೊಳ್ಳುತ್ತಾರೆ. ಅವರ ಗಾಯನದಲ್ಲಿ ಇರುವ ಭಾವ, ದೇಶಪ್ರೇಮ, ಜನರನ್ನು ಬೆಸೆಯುವ ಶಕ್ತಿ ಇದಕ್ಕೆ ಕಾರಣ. ಅವರು ಹಾಡಲು ಪ್ರಾರಂಭಿಸಿದರೆ, ಕೇಳುಗರು ಮಂತ್ರಮುಗ್ಧರಾಗುತ್ತಾರೆ.

ಪ್ರಶಸ್ತಿಗಳ ಸುರಿಮಳೆ – ಪರಿಶ್ರಮಕ್ಕೆ ಸಂದ ಗೌರವ

ಅವರ 30 ವರ್ಷಗಳ ನಿಸ್ವಾರ್ಥ ಸೇವೆ ಮತ್ತು ಕಲಾ ಸಾಧನೆಯನ್ನು ಗುರುತಿಸಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ – ಬೆಂಗಳೂರು, ಚಂದನ ಸಂಗೀತ ಚೇತನ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ – ಬೆಂಗಳೂರು, ಪೊಲೀಸ್ ಇಲಾಖೆಯ ಪ್ರತಿಷ್ಠಿತ ಉತ್ತಮ ಆರಕ್ಷಕ ಪುರಸ್ಕಾರ, ಸೇವಾ ರತ್ನ – ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್, ಕಾವ್ಯ ಸಿರಿ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಗೌರವಗಳು ಲಭಿಸಿವೆ.

ಒಬ್ಬ ವ್ಯಕ್ತಿ ಬಯಸಿದರೆ ವೃತ್ತಿ ಬದುಕಿನ ಜೊತೆಗೆ ತನ್ನ ಹವ್ಯಾಸವನ್ನೂ ಹೇಗೆ ಉಳಿಸಿಕೊಂಡು ಬೆಳೆಯಬಹುದು ಎಂಬುದಕ್ಕೆ ಸುಬ್ರಾಯ ಸರ್ ಅವರೇ ಜೀವಂತ ಉದಾಹರಣೆ. ಅವರ ಈ ಪಯಣ ಇಂದಿನ ಯುವ ಪೊಲೀಸರಿಗೆ ಮತ್ತು ಸಂಗೀತ ಆಸಕ್ತ ಯುವಕರಿಗೆ ದೊಡ್ಡ ಸ್ಪೂರ್ತಿ.

ಇಂತಹ ಸಾಧಕ, ಸರಳ, ಸೇವಾ ಮನೋಭಾವದ ಕಲಾವಿದನನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ಕಲಾತ್ಮಕ ಜಗತ್ತು, ಬೆಳ್ಳಾರೆ, ಸುಳ್ಯ – ಸೇವಾ ನಿಧಿ ಸಂಸ್ಥೆಯ ಸಂಸ್ಥಾಪಕ ನಾಗೇಶ್ ಅವರು ತಿಳಿಸಿದ್ದಾರೆ.

ವರದಿ: ಕಲಾತ್ಮಕ ಜಗತ್ತು, ಬೆಳ್ಳಾರೆ