ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ
ಮಲ್ಪೆ : ರಾಷ್ಟ್ರೀಕೃತ ಬ್ಯಾಂಕುಗಳ ಮಾದರಿಯಲ್ಲಿ ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಕೇಂದ್ರ ಸಹಕಾರ ಇಲಾಖೆ ಆರಂಭಿಸಿದ ತ್ರಿಭುವನ್ ಸಹಕಾರ ವಿವಿಯು ಸಹಕಾರ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಲಿದೆ ಎಂದು ಉಡುಪಿ ಶಾಸಕ ಯಶಪಾಲ ಸುವರ್ಣ ಹೇಳಿದ್ದಾರೆ.
ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಮಲ್ಪೆ ಯಾಂತ್ರಿಕ ದೋಣಿ(ಟ್ರಾಲ್) ಮೀನುಗಾರ ಸಹಕಾರ ಸಂಘ, ಉಡುಪಿ ಜಿಲ್ಲಾ ಸಹಕಾರ ಇಲಾಖೆ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣೆ ಕುರಿತು ಜುಲೈ 19 ರಂದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿರುವ ಮೀನುಗಾರರ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಕರಾವಳಿ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕಾ ಕ್ಷೇತ್ರ ಸಹಕಾರ ತ್ವದ ತಳಹದಿಯಲ್ಲಿ ಮುನ್ನಡೆಯುತ್ತಿದೆ. ಕೇಂದ್ರ, ರಾಜ್ಯದ ನಾನಾ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ವ್ಯವಸ್ಥಿತವಾಗಿ ತಲುಪಿಸುವ ಕೆಲಸ, ಮೀನುಗಾರರಿಗೆ ನ್ಯಾಯ ಒದಗಿಸುವ ಕೆಲಸ ಸಹಕಾರ ಕ್ಷೇತ್ರದಿಂದ ಆಗುತ್ತಿದೆ. ಸಹಕಾರ ಸಂಘಗಳು ಗಳಿಸಿದ ಲಾಭವನ್ನು ಜನ ಸಮಾಜ ಏಳಿಗೆಗೆ ವಿನಿಯೋಗಿಸಬೇಕು ಎಂದರು.
ಸನ್ಮಾನ
ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಲ್ಪೆ ಯಾಂತ್ರಿಕ ದೋಣಿ(ಟ್ರಾಲ್) ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್ ಎರಡು ದಶಕಗಳಿಂದ ಸಂಸ್ಥೆಯನ್ನು ಲಾಭದಲ್ಲಿ ಮುನ್ನಡೆಸುತ್ತಿರುವ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ ಮಾತನಾಡಿ, ಮೀನುಗಾರರಿಗೆ ವಿಮೆ, ಸಹಕಾರ ಸಂಘಗಳು ವರ್ಷಕ್ಕೆ ತಲಾ 100 ಮನೆಗಳ ವ್ಯಾಪ್ತಿಯಲ್ಲಿ ಗಿಡ ನೆಡಬೇಕು, ಪ್ಲಾಸ್ಟಿಕ್ ನಿಯಂತ್ರಿಸಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ವರ್ಷದ ಫಲಕ್ಕೆ ಹೂ ಗಿಡ, ಹತ್ತು ವರ್ಷದ ಫಲ ಗಳಿಕೆಗೆ ಹಣ್ಣಿನ ಗಿಡ, ನಿರಂತರ ಫಲ ಬೇಕಿದ್ದರೆ ಜ್ಞಾನದ ಬೀಜ ಬಿತ್ತಬೇಕು. ಸಹಕಾರ ಕ್ಷೇತ್ರದಿಂದ ಪ್ರಕೃತಿ ಉಳಿಸಲು ಜಿಲ್ಲೆಯ 79 ಸಹಕಾರ ಸಂಸ್ಥೆಗಳು 50,000 ಗಿಡ ನೆಟ್ಟಿದ್ದು ಒಂದು ಲಕ್ಷ ಗಿಡ ನೆಡುವ ಗುರಿಯಿದೆ, ವಿದ್ಯಾರ್ಥಿಗಳ ಮೂಲಕ ತಾಯಿ ಹೆಸರಲ್ಲಿ ಗಿಡ ನೆಡಲಾಗುವುದು ಎಂದು ಹೇಳಿದರು.
ಸಹಕಾರ ಸಂಘಗಳ ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಧೀರ್ ಕುಮಾರ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವೈ.ಸುಧೀರ್, ಸುರೇಶ್, ಶ್ರೀಧರ್ ಪಿ.ಎಸ್., ಮಲ್ಪೆ ಯಾಂತ್ರಿಕ ದೋಣಿ (ಟ್ರಾಲ್) ಮೀನುಗಾರರ ಸಂಘದ ಉಪಾಧ್ಯಕ್ಷ ಪ್ರಕಾಶ್ ಬಂಗೇರ ಉಪಸ್ಥಿತರಿದ್ದರು.
ಕೃಷ್ಣ ಶ್ರೀಯಾನ್ ಪ್ರಾರ್ಥಿಸಿದರು. ಯೂನಿಯನ್ ಮುಖ್ಯ ಕಾರ್ಯನಿರ್ವಹನಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಡಾ.ಶಿವರಾಮ್ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಅವರು ಸಹಕಾರ ತತ್ವಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ವಕೀಲ ಶ್ರೀಧರ ಪಿ.ಎಸ್.ಅವರು ದೇಶದ ಆರ್ಥಿಕ ಪ್ರಗತಿಯಲ್ಲಿ ಮೀನುಗಾರಿಕಾ ಸಹಕಾರ ಸಂಘಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು.

