ಕಾರ್ಕಳ : ಶಾಂಭವಿ ನದಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಬೆಳಕಿಗೆ ಬಂದಿದ್ದು, ಮೃತರನ್ನು ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ನಿವಾಸಿ ಇಷಾನ್ ಪಾಶಾ (40) ಎಂದು ಗುರುತಿಸಲಾಗಿದೆ.
ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದವರಾದ ಇಷಾನ್ ಪಾಶಾ ಅವರು ಮೊದಲ ಪತ್ನಿಯ ನಿಧನದ ಬಳಿಕ ಸುಮಾರು ಏಳು ತಿಂಗಳ ಹಿಂದೆ ಶಮೀನ್ ಅವರನ್ನು ವಿವಾಹವಾಗಿ ಜಾರಿಗೆಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಮೇ 25ರಂದು ಮಂಗಳೂರಿನ ಜೋಕಟ್ಟೆಯಲ್ಲಿರುವ ತಮ್ಮ ತಂಗಿಯ ಮನೆಯಿಂದ ಬಂದು, ಕೆಲಸಕ್ಕೆ ಹೋಗುವುದಾಗಿ ಪತ್ನಿಗೆ ತಿಳಿಸಿ ಮನೆಯಿಂದ ಹೊರಟಿದ್ದರು. ಬಳಿಕ ಅವರು ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ಗುರುವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಶೆಟ್ಟಿಬೆಟ್ಟು ಸಮೀಪದ ಶಾಂಭವಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವರು ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿರಬಹುದು ಅಥವಾ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

