
ಮೂಡುಬಿದಿರೆ: ಶ್ರೀ ಮಹಾವೀರ ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ಕನ್ನಡ ವಿಭಾಗ, ಕನ್ನಡ ಸಂಘ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶಗಳ ಸಹಯೋಗದಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕವಿ, ಸಾಹಿತಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹರೀಶ್ ಟಿ.ಜಿ. ಮಾತನಾಡಿ, ಅರ್ಥಪೂರ್ಣ ಪದಗಳಿಗೆ ಭಾವ ತುಂಬುವವನೇ ಕವಿ ಎಂದು ಅಭಿಪ್ರಾಯಪಟ್ಟರು.
ಪ್ರಾಚೀನ ಹಾಗೂ ಆಧುನಿಕ ಕವಿಗಳ ಕಾವ್ಯಸಾಲುಗಳ ಉದಾಹರಣೆಗಳ ಮೂಲಕ ಕನ್ನಡ ನಾಡು-ನುಡಿಯ ಹಿರಿಮೆಯನ್ನು ವಿವರಿಸಿದ ಅವರು, ಸಾಹಿತ್ಯ ಮತ್ತು ಜನಜೀವನದಲ್ಲಿ ಕನ್ನಡತನ ಅಂದಿನಿಂದ ಇಂದಿನವರೆಗೂ ಹಾಸುಹೊಕ್ಕಾಗಿದೆ ಎಂದರು. ಕವಿಗಳು ಸುಮ್ಮನೆ ಕಾವ್ಯ ಅಥವಾ ಸಾಹಿತ್ಯ ರಚಿಸುವುದಿಲ್ಲ. ಪ್ರತಿಯೊಂದು ಬರಹದ ಹಿಂದೆಯೂ ಒಂದು ಆಶಯ ಮತ್ತು ಸಂಕಲ್ಪವಿರುತ್ತದೆ. ಕನ್ನಡ ಸಾಹಿತ್ಯವನ್ನು ಓದುವ ಮೂಲಕ ನಮ್ಮ ಪರಂಪರೆಯನ್ನು ಅರ್ಥಮಾಡಿಕೊಂಡು ಭಾಷೆಯನ್ನು ಉಳಿಸಿ, ಬಳಸಿ, ಬೆಳೆಸಲು ಸಾಧ್ಯ ಎಂದು ತಿಳಿಸಿದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ ಮಾತನಾಡಿ, ಕನ್ನಡ ಭಾಷೆಯ ಕುರಿತು ಸಾಹಿತಿಗಳು ವ್ಯಕ್ತಪಡಿಸಿರುವ ಅಭಿಮಾನ ಮತ್ತು ಹೊಗಳಿಕೆಗಳು ಅರ್ಥಪೂರ್ಣವಾಗಿವೆ. ವಿದ್ಯಾರ್ಥಿಗಳು ಕನ್ನಡವನ್ನು ಚೆನ್ನಾಗಿ ಕಲಿಯುವ ಮೂಲಕ ಅದನ್ನು ಅನ್ನದ ಭಾಷೆಯನ್ನಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹರೀಶ್ ಮಾತನಾಡಿ, ಕುವೆಂಪು ಅವರಿಂದ ರಚಿತವಾದ ಅರ್ಥಪೂರ್ಣ ನಾಡಗೀತೆಯನ್ನು ಹೊಂದಿರುವುದು ನಮ್ಮ ಹೆಮ್ಮೆಯ ಸಂಗತಿ. ಒಂದು ಕಾಲದಲ್ಲಿ ದೃಶ್ಯ ಮಾಧ್ಯಮಗಳು ಕನ್ನಡ ಭಾಷಾ ಕಲಿಕೆಗೆ ಪೂರಕವಾಗಿದ್ದವು. ಇಂದು ಪರಿಸ್ಥಿತಿ ಬದಲಾಗಿದ್ದರೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಅದನ್ನು ಉಳಿಸಿ ಬೆಳೆಸುವತ್ತ ಎಲ್ಲರೂ ಗಮನಹರಿಸಬೇಕು ಎಂದು ಹೇಳಿದರು.
ಕನ್ನಡ ಸಂಘದ ಸಂಚಾಲಕ ಹಾಗೂ ವಿಭಾಗದ ಮುಖ್ಯಸ್ಥ ಡಾ. ಚಿನ್ನಸ್ವಾಮಿ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಅಂದದ ಕೈಬರಹ ಸ್ಪರ್ಧೆ, ಸ್ಪಷ್ಟ ಕನ್ನಡ ವಾಚನ ಸ್ಪರ್ಧೆ ಹಾಗೂ ಕನ್ನಡ ನಾಡಿನ ವಾಸ್ತುಶಿಲ್ಪಗಳ ಕುರಿತ ಪ್ರಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕನ್ನಡ ಸಂಘದ ಕಾರ್ಯದರ್ಶಿ ಹಾಗೂ ಅಂತಿಮ ಬಿ.ಎ. ವಿದ್ಯಾರ್ಥಿ ರಂಜನ್ ಎಂ.ಆರ್., ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪದವಿ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಚಂದನಾ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ತನುಜ ವಂದಿಸಿದರು. ಪದವಿ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಲಾ ವಿಭಾಗದ ವಿದ್ಯಾರ್ಥಿಗಳ ಸೃಜನಶೀಲ ಚಟುವಟಿಕೆಯ ಮೂಲಕ ಸಿದ್ಧಪಡಿಸಲಾದ ಕಾರ್ಯಕ್ರಮದ ನಾಮಫಲಕ ವಿಶೇಷ ಆಕರ್ಷಣೆಯಾಗಿತ್ತು.
