
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯ ಹಾಗೂ ಪದವಿಪೂರ್ವ ಕಾಲೇಜು, ವಿದ್ಯಾಗಿರಿ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತುಂಬೆ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಅಬ್ದುಲ್ ರಹಿಮಾನ್ ಡಿ.ಬಿ. ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯ ದೇಶದಲ್ಲಿಯೇ ವಿಶೇಷ ಸ್ಥಾನಮಾನ ಮತ್ತು ಮೌಲ್ಯವನ್ನು ಹೊಂದಿದೆ. ಕನ್ನಡವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಈ ಮೂಲಕ ನಾವು ಕನ್ನಡಾಂಬೆಯ ಋಣವನ್ನು ತೀರಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಡಿ. ಮಂಚಿ ಮಾತನಾಡಿ, ಇಂದು ಕನ್ನಡ ಭಾಷೆ ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ. ಕನ್ನಡಿಗರಾದ ನಾವೆಲ್ಲರೂ ಜಾಗೃತರಾಗಿ ದೈನಂದಿನ ವ್ಯವಹಾರ, ಶಿಕ್ಷಣ, ಸಂಭಾಷಣೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕನ್ನಡವನ್ನು ಮಾಧ್ಯಮವಾಗಿ ಬಳಸಬೇಕು. ಕನ್ನಡವನ್ನು ಉಳಿಸಿ, ಬೆಳೆಸಿ, ಕಲಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಸುರದನ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಕೆ. ಶಿವಣ್ಣ ಪ್ರಭು ಉಪಸ್ಥಿತರಿದ್ದರು.
ಕುಮಾರಿ ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ತನ್ವಿ ಸ್ವಾಗತಿಸಿ, ಕುಮಾರಿ ಗಾನ ವಂದಿಸಿದರು.
