ಅಚ್ಚರಕಟ್ಟೆ : ಶ್ರೀ ಸುಮುಖ ಕುಣಿತ ಭಜನಾ ತಂಡದ ಮಕ್ಕಳಿಗೆ ಸಮವಸ್ತ್ರ ವಿತರಣೆ – ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಭಜನೆ ಸಹಕಾರಿ

0
84

​ಮೂಡುಬಿದಿರೆ : ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ಸುಮುಖ ಕಲಾಮಂದಿರದಲ್ಲಿ ‘ಶ್ರೀ ಸುಮುಖ ಭಜನಾ ಮಂಡಳಿ’ ಹಾಗೂ ‘ಶ್ರೀ ಸುಮುಖ ಮಹಿಳಾ ಭಜನಾ ತಂಡ’ದ ಆಶ್ರಯದಲ್ಲಿ ಶ್ರೀ ಸುಮುಖ ಕುಣಿತ ಭಜನಾ ತಂಡದ ಮಕ್ಕಳಿಗೆ ಸಮವಸ್ತ್ರ ವಿತರಣಾ ಸಮಾರಂಭವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಜರುಗಿತು.

​ಸಂಸ್ಥೆಯ ಬೆಳವಣಿಗೆಗೆ ನಮ್ಮ ಸಹಕಾರ ಸದಾ ಇದೆ: ದಯಾನಂದ ಪೈ

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷರಾದ ದಯಾನಂದ ಪೈ ಅವರು, “ಸುಮುಖ ಭಜನಾ ಮಂಡಳಿಯು ಅತ್ಯಂತ ಶ್ರೇಷ್ಠ ಹಾಗೂ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದೆ. ಇಂದಿನ ಪೀಳಿಗೆಯ ಹಲವಾರು ಮಕ್ಕಳಿಗೆ ಧಾರ್ಮಿಕ ಚಿಂತನೆ ಹಾಗೂ ಸಂಸ್ಕಾರಯುತ ಜೀವನವನ್ನು ಕಲ್ಪಿಸುವ ದೊಡ್ಡ ಮಹಾ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ. ಸುಮುಖ ಭಜನಾ ಮಂಡಳಿಗೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ, ಇನ್ನಷ್ಟು ಈ ಸಂಘಟನೆ ಎತ್ತರಕ್ಕೆ ಬೆಳೆಯುವಂತಾಗಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭಾರತೀಯ ಜನತಾ ಪಾರ್ಟಿಯ ಉಪಾಧ್ಯಕ್ಷರಾದ ಸೂರಜ್ ಜೈನ್ ಅವರು, “ಪ್ರತಿ ಗ್ರಾಮದಲ್ಲಿಯೂ ಭಜನಾ ಮಂಡಳಿಗಳು ತಲೆ ಎತ್ತಬೇಕಾಗಿದೆ. ಇವು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವಂತಹ ಕೇಂದ್ರಗಳಾಗಿ ಬೆಳೆದರೆ, ಮುಂದಿನ ದಿನಗಳಲ್ಲಿ ಭಾರತವನ್ನು ವೈಭವದ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

​ಭಾರತೀಯ ಸಂಸ್ಕೃತಿಯ ರಕ್ಷಣೆಗೆ ಭಜನೆ ದಾರಿ: ನ್ಯಾಯವಾದಿ ರೂಪ ಬಳ್ಳಾಲ್

ಖ್ಯಾತ ನ್ಯಾಯವಾದಿ ರೂಪ ಬಳ್ಳಾಲ್ ಅವರು ಮಾತನಾಡಿ, “ಆಧುನಿಕ ಸಮಾಜದಲ್ಲಿ ಇಂದಿನ ಮಕ್ಕಳಿಗೆ ಭಜನೆಯ ನಿರಂತರ ಅಭ್ಯಾಸದಿಂದಾಗಿ ಪಾಶ್ಚಾತ್ಯ ಸಂಸ್ಕೃತಿಯಿಂದ ಭಾರತೀಯ ಸಂಸ್ಕೃತಿಗೆ ಆದಂತಹ ದುಷ್ಪರಿಣಾಮದ ಪ್ರಭಾವದಿಂದ ಹೊರಬರಲು ದಾರಿಮಾಡಿಕೊಡುತ್ತದೆ. ಈ ಶ್ರೇಷ್ಠ ಕಾರ್ಯವನ್ನು ಸುಮುಖ ಭಜನಾ ಮಂಡಳಿ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ನಮ್ಮ ಇಡೀ ಊರಿಗೆ ಹೆಮ್ಮೆಯ ವಿಷಯವಾಗಿದೆ” ಎಂದು ಶ್ಲಾಘಿಸಿದರು.

ಈ ಶುಭ ಸಂದರ್ಭದಲ್ಲಿ ಸುಮುಖ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರವೀಣ್, ಮುಖ ಮಹಿಳಾ ಮಂಡಳಿಯ ಅಧ್ಯಕ್ಷರಾದ ಉಮಾವತಿ ಅಚ್ಚರಕಟ್ಟೆ ಶಾಲೆಯ ಶಕುಂತಲ ಟೀಚರ್, ಪಾಪಣ್ಣ, ಜಗತ್ಬಾಲ್ ಜೈನ್, ಭಜನೆಯ ಗುರುಗಳಾದ ಲಕ್ಷ್ಮಣ್ ಮತ್ತು ಪ್ರವೀಣ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರು, ಪೋಷಕರು ಮತ್ತು ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.