ಎಡಿಸನ್, ನ್ಯೂ ಜೆರ್ಸಿ, ಅಮೆರಿಕಾ : ದಿನಾಂಕ ಜೂನ್ 7 , 2026ರಂದು ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪುರ ಪ್ರವೇಶ ಮತ್ತು ಪೌರ ಸನ್ಮಾನ ಎಡಿಸನ್ ಶ್ರೀ ಕೃಷ್ಣ ವೃಂದಾವನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಶ್ರೀ ಸುಗುಣೇಂದ್ರ ತೀರ್ಥರಿಗೆ ತಮ್ಮ ಎರಡು ವರ್ಷ ಪರ್ಯಾಯಾವಧಿಯನ್ನು ಪೂರೈಸಿದ ಬಳಿಕದ ಮೊದಲ ಅಮೆರಿಕಾ ಭೇಟಿ ಇದಾಗಿದೆ. ಇಲ್ಲಿಗೂ ಮುನ್ನ ಶ್ರೀಗಳು ಲಂಡನ್ ಹಾಗೂ ಕೆನಡಾದ ಟೊರಂಟೋದಲ್ಲಿರುವ ತಮ್ಮ ಮಠಗಳಿಗೆ ಭೇಟಿಯಿತ್ತರು.
ಅಧಿಕ ಮಾಸದ ಪರ್ವ ಕಾಲದಲ್ಲಿ ಅಮೆರಿಕಾದ ಪೂರ್ವ ಕರಾವಳಿಯ ಭಕ್ತರು ಶ್ರೀಗಳ ಭೇಟಿಯನ್ನು ತೀವ್ರ ಕಾತರದಿಂದ ಎದುರು ನೋಡುತ್ತಿದುದಕ್ಕೆ ಶ್ರೀಗಳ ಭೇಟಿ ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿದುದಕ್ಕೆ ನೆರೆದಿದ್ದ ಸುಮಾರು ಐದುನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಭಕ್ತರೇ ಸಾಕ್ಷಿ.
ಯತಿಕುಲ ಚಕ್ರವರ್ತಿ ಎಂದು ನಾಮಾಂಕಿತಗೊಂಡ ಶ್ರೀಗಳಿಗೆ ಎಡಿಸನ್ ನಗರದ ಹೃದಯ ಭಾಗದಲ್ಲಿರುವ ರಸ್ತೆಗಳಲ್ಲಿ ಕುದುರೆ ಸಾರೋಟು, ಪೂರ್ಣ ಕುಂಭ, ಸ್ಯಾಕ್ಸೋಫೋನ್, ಕೊಳಲು, ಡೋಲಕ, ಕೋಲಾಟ ನೃತ್ಯ ಮತ್ತು ವೇದ ಘೋಷದೊಂದಿಗೆ ಶ್ರೀ ಕೃಷ್ಣ ವೃಂದಾವನದ ಆವರಣಕ್ಕೆ ಕರೆದುಕೊಂಡು ಬಂದಿತು. ಯತಿಕುಲ ಚಕ್ರವರ್ತಿಗಳಿಗೆ ಜಯವಾಗಲಿ, ಸುಗುಣೇಂದ್ರ ತೀರ್ಥರಿಗೆ ಜಯವಾಗಲಿ ಎನ್ನುವ ಉದ್ಗಾರ ಮುಗಿಲುಮುಟ್ಟುತ್ತಿದ್ದಂತೆಯೇ ಸಾರೋಟಿನಿಂದ ಕೆಳಗಿಳಿದ ಶ್ರೀಗಳು ಅರಳು ಮತ್ತು ಪುಷ್ಪವೃಷ್ಟಿಯ ನಡುವೆ ತಮ್ಮ ಅತ್ಯಂತ ನೆಚ್ಚಿನ ಮಠ, ಅಮೆರಿಕಾದಲ್ಲಿ ಧರ್ಮಸಂಸ್ಥಾಪನೆಯ ಅಡಿಗಲ್ಲನ್ನು ಹಾಕಲು ಸಹಕರಿಸಿದ ಎಲ್ಲ ಭಕ್ತರೆದುರು ಮುಗುಳ್ನಗುತ್ತಾ ಶಾಲಗ್ರಾಮ ಶಿಲಾರೂಪಿ ಶ್ರೀ ಕೃಷ್ಣನನ್ನು ದರ್ಶನ ಮಾಡಿ ಕೃಷ್ಣನಿಗೆ ಆರತಿ ಬೆಳಗಿದ ಬಳಿಕ ಶ್ರೀಗಳನ್ನು ಪ್ರಸನ್ನಾಚಾರ್ಯರು ಮತ್ತು ಯೋಗೀನ್ದ್ರ ಭಟ್ಟರು ಕೈಹಿಡಿದು ಆನಂದತೀರ್ಥ ಮಂಟಪದಲ್ಲಿರುವ ವೇದಿಕೆಗೆ ಕರೆದೊಯ್ದು ಸಿಂಹಾಸನದಲ್ಲಿ ಕುಳ್ಳಿರಿಸಿದರು.
ಮಠದ ಮತ್ತು ಯೋಗೀನ್ದ್ರ ಭಟ್ಟರ ಮಾರ್ಗದರ್ಶನದಲ್ಲಿ ಪಾಠ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ವೇದಘೋಷ ಮತ್ತು ಮಠದ ಯುವತಂಡದ ಸದಸ್ಯರಿಂದ ಉಡುಪಿಯ ಕಂಡೀರಾ ಕೃತಿಯ ಅಕಪೆಲ್ಲ ಶೈಲಿಯ ಪ್ರಸ್ತುತಿಯ ಬಳಿಕ ಶ್ರೀವತ್ಸ ಬಲ್ಲಾಳರ ಪ್ರಸ್ತಾವನೆ, ಯೋಗೀನ್ದ್ರ ಭಟ್ಟರ ಸ್ವಾಗತ ಶ್ರೀಗಳನ್ನು ಹೃದಯಸ್ಪರ್ಶಿಯಾಗಿ ಮತ್ತೊಮ್ಮೆ ಅಮೆರಿಕಾದ ಮಣ್ಣಿಗೆ, ನ್ಯೂ ಜೆರ್ಸಿ ಕ್ಷೇತ್ರಕ್ಕೆ ಆತ್ಮೀಯವಾಗಿ ಬರಮಾಡಿಕೊಂಡಿತು.
ನಮಹೇಶ್ ಹಾವೂರ್ ಶ್ರೀಗಳ ಪೌರ ಸನ್ಮಾನದ ಪ್ರಸ್ತಾವನೆಯನ್ನು ಮುಂದಿಟ್ಟು, ಶ್ರೀಗಳ ಸಾಧನೆಯನ್ನು ಕೊಂಡಾಡಿದರು. ಮಠದ ಆವರಣಕ್ಕೆ ಸುಮಾರು ಮೂರು ವರುಷಗಳ ಬಳಿಕ ಮರಳುತ್ತಿದ್ದಾಗ ಹೇಗೆ ಶ್ರೀಗಳ ಮುಖದಲ್ಲಿ ಧನ್ಯತೆಯ, ತೃಪ್ತಿಯ ಭಾವವಿತ್ತು ಎನ್ನುವ ಸೂಕ್ಹ್ಮವಾದ ಎಳೆಯನ್ನು ಭಕ್ತರೆದುರು ತೆರೆದಿಟ್ಟಾಗ ಸಭಾಗಣದಲ್ಲಿ ಕಿವಿಗಡುಚಿಕ್ಕುವ ಕರತಾಡನ.
ನ್ಯೂ ಜೆರ್ಸಿಯ ಮೊಂಟುಗೊಮೆರಿ ಪಟ್ಟಣದ ಮೇಯರ್ ನೀನಾ ಸಿಂಗ್ ಮತ್ತು ಪತಿ ಪರಂಜಿತ್ ಸಿಂಗ್ ವಿಶೇಷ ಅತಿಥಿಗಳಾಗಿ ಆಗಮಿಸಿ ಪೌರ ಸನ್ಮಾನಕ್ಕೆ ಸ್ಥಳೀಯ ಸರಕಾರದ ಸಂಪೂರ್ಣ ಸಹಕಾರ ಬೆಂಬಲವನ್ನು ತೋರಿದ್ದು ಶ್ರೀಗಳಿಗೆ ಅಮೆರಿಕಾದ ಜನತೆ ತೋರಿದ ಗೌರವಕ್ಕೆ ಹಿಡಿದ ಕನ್ನಡಿ. ಸನ್ಮಾನ ಪತ್ರವನ್ನು ವಾಚಿಸಿದ ಮೇಯರ್ ನೀನಾ ಸಿಂಗ್ ಪತ್ರ ಮತ್ತು ಫಲಕವನ್ನು ಶ್ರೀಗಳಿಗೆ ಇತ್ತು ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ಶ್ರೀಗಳ ಎಲ್ಲ ಭಕ್ತರ ಪರವಾಗಿ ಅಭಿಮಾನಿ ಶಿಷ್ಯರಾದ ಡಾ ಸುಧೀಂದ್ರ, ಪೂರ್ಣಿಮಾ , ಉದ್ಯಮಿ ಸುರೇಶ ವಸಿಷ್ಠ, ಮೀನಾ ವಸಿಷ್ಠ, ಚೇತನ್ ಭರ್ಗಿರಿ ಅವರು ಶ್ರೀಗಳಿಗೆ ಶಾಲು, ಹಾರ ಮತ್ತು ಪೇಟವನ್ನು ತೊಡಿಸಿ ಪುಷ್ಪವೃಷ್ಟಿಯ ನಡುವೆ ಶ್ರೀಗಳಿಗೆ ಸನ್ಮಾನವನ್ನು ಅತ್ಯಂತ ಭಾವುಕರಾಗಿ ನಡೆಸಿಕೊಟ್ಟರು. ಡಾ ಸುಧೀಂದ್ರ ಅವರು ಶ್ರೀಗಳ ಕಳೆದ ಮೂರು ದಶಕಗಳ ಛಲಬಿಡದ ತ್ರಿವಿಕ್ರಮನಂತೆ ನಡೆಸಿದ ಸಾಧನೆಯನ್ನು ಕೊಂಡಾಡಿ ಶ್ರೀಗಳ ಎಲ್ಲ ಕೆಲಸಗಳಿಗೂ ತಮ್ಮ ಮತ್ತು ಅಮೆರಿಕಾ ಭಕ್ತರ ಪೂರ್ಣ ಸಹಕಾರವನ್ನು ಮತ್ತೊಮ್ಮೆ ಶ್ರೀಗಳೆದುರು ವ್ಯಕ್ತಪಡಿಸಿದರು.
ಜಗತ್ತಿನ್ನೆಲ್ಲೆಡೆ ಇರುವ ಕೃಷ್ಣ ಭಕ್ತರಿಗೆ ಹಂಚಲು ಬಂದಿದ್ದೇನೆ ಪೂಜ್ಯ ಪುತ್ತಿಗೆ ಶ್ರೀ
ಭಗವದ್ಗೀತೆಯ ಹನ್ನೆರಡನೇ ಅಧ್ಯಾಯದ ಪಠಣದ ನಡುವೆ ನಡೆದ ಪೌರ ಸನ್ಮಾನಕ್ಕೆ ಉತ್ತರಿಸಿದ ಶ್ರೀಗಳು, ಸುಧೀರ್ಘ ಎರಡೂವರೆ ವರ್ಷದ ಬಳಿಕ ಅಮೆರಿಕಾದ ನ್ಯೂಜೆರ್ಸಿ ಕ್ಷೇತ್ರಕ್ಕೆ ಮರಳಿದ್ದು ತಮಗೆ ತವರು ಮನೆಗೆ ಬಂದಷ್ಟೇ ಸಂತೋಷವಾಗಿದೆ ಎಂದು ಅತ್ಯಂತ ಪ್ರೀತಿಯಿಂದ ತಮ್ಮ ಭಕ್ತರನ್ನು ಸಂತಸದ ಪರಾಕಾಷ್ಠೆಗೆ ಕರೆದೊಯ್ದರು.
ತನ್ನ ಚತುರ್ಥ ಪರ್ಯಾವಧಿಯಲ್ಲಿ ಪಡೆದ, ಕ್ರೋಡೀಕರಿಸಿದ ಪುಣ್ಯವನ್ನೆಲ್ಲ ಇದೀಗ ಜಗತ್ತಿನ್ನೆಲ್ಲೆಡೆ ಇರುವ ಕೃಷ್ಣ ಭಕ್ತರಿಗೆ ಹಂಚಲು ಬಂದಿದ್ದೇನೆ, ಭಕ್ತಿಯನ್ನು ಇತ್ತು ಭಕ್ತಿಯನ್ನು ಪಡೆಯಿರಿ ಎನ್ನುವ ವಿಶೇಷ ಸಂದೇಶವನ್ನು ಕೂಡ ಶ್ರೀಗಳು ನೀಡಿದರು. ಗೀತೆಯ ಮಹತ್ವವನ್ನು ಮನದಟ್ಟುಗೊಳಿಸುತ್ತಾ ಶ್ರೀಗಳು ತಮ್ಮ ಕೋಟಿ ಗೀತಾ ಲೇಖನ ಯಜ್ಞವನ್ನು ತಮ್ಮ ಪಂಚಮ ಪರ್ಯಾಯಾವಧಿಯವರೆಗೂ ಮುಂದುವರಿಸುವುದಾಗಿ ತಿಳಿಸಿ, ಹೇಗೆ ಹಲವಾರು ಭಕ್ತರು ಗೀತಾ ಲೇಖನದಿಂದ ತಮ್ಮ ಜೀವನದ ಪಥವನ್ನೇ ಬದಲಿಸಿಕೊಂಡಿರುವುದಾಗಿ ಉದಾಹರಿಸಿ ನೆರೆದಿದ್ದ ಭಕ್ತರನ್ನೆಲ್ಲ ಭಕ್ತಿಯ ಕಡಲಲ್ಲಿ ಮಿಂದೇಳುವಂತೆ ಮಾಡಿದರು.
ಕೋಟಿಗೀತಾಲೇಖನಯಜ್ಞದ ಸ್ಮಾರಕವಾಗಿ ನ್ಯೂಜೆರ್ಸಿ ಮಠದಲ್ಲಿ ಅಪೂರ್ವ ಯಜ್ಞಶಾಲೆ ನಿರ್ಮಾಣ -ಶ್ರೀ ಶ್ರೀ
ತಮ್ಮ ಮುಂದಿರುವ ಯೋಜನೆಗಳ ಬಗ್ಗೆ ಸೂಕ್ಷ್ಮ ನೋಟವನ್ನು ಹರಿಸಿದ ಶ್ರೀಗಳು ಯಜ್ಞಶಾಲೆಯ ಬಗ್ಗೆ ಶ್ರೀ ಮಠದ ಶಿಷ್ಯರು ವಿವರವಾದ ಮಾಹಿತಿಯನ್ನು ನೀಡುವ ಸೂಚನೆಯನ್ನಿತ್ತರು.
ಶ್ರೀಮಠದ ಶಿಷ್ಯರೂ ಮಹಾದಾನಿಗಳೂ ಆದ ಚೇತನ್ ಭರ್ಗಿರಿ ಅವರು ಯಜ್ಞಶಾಲೆಯ ಪ್ರಗತಿ ಪತ್ರ ಮಂಡಿಸಿ ಇಲ್ಲಿಯವರೆಗೂ ನಡೆದ ಮತ್ತು ಮುಂದೆ ನಡೆಯಬೇಕಾದ ಕೆಲಸದ ಬಗ್ಗೆ ಚಿತ್ರ ಸಹಿತ ವರದಿಯನ್ನು ಸಲ್ಲಿಸಿದರು.
ಸುಮಾರು ಒಂದು ಮಿಲಿಯಕ್ಕೂ ಅಧಿಕ ಡಾಲರ್ ವೆಚ್ಚದ ಈ ಯೋಜನೆಗೆ ಇಲ್ಲಿಯವರೆಗೆ ಹರಿದುಬಂದಿರುವ ಐದುನೂರು ಸಾವಿರದಷ್ಟು ಧನ ಸಹಾಯ ಮತ್ತು ಇನ್ನೂ ಬೇಕಾಗಿರುವ ದೇಣಿಗೆಯ ಬಗ್ಗೆ ಭಕ್ತರೆದುರು ಕಳಕಳಿಯ ಮನವಿಯನ್ನು ಸಲ್ಲಿಸಿದರು.
ಸನ್ಮಾನ ಕಾರ್ಯಕ್ರಮದ ಕೊನೆಯ ಅಂಗವಾಗಿ ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದನಾರ್ಪಣೆಗೈದರು.
ಶ್ರೀಗಳ ಮಹದಾಕಾಂಕ್ಷೆಯ ಜಗತ್ತಿನಾದ್ಯಂತ ಕಟ್ಟಿ ಬೆಳೆಸಲಿರುವ ನೂರೆಂಟು ಕೃಷ್ಣಮಂದಿರದ ಯೋಜನೆಯನ್ನು ನನಸಾಗಿಸುವ ಎಲ್ಲ ಪ್ರಯತ್ನವನ್ನು ನಡೆಸುವುದಾಗಿ ಪ್ರಾಮಾಣಿಕ ಸಹಕಾರವನ್ನು ಶ್ರೀಗಳಿಗೆ ತೋರಿ ಅವರ ಆಶೀರ್ವಾದವನ್ನು ಬೇಡುತ್ತಾ ಇಲ್ಲಿಯವರೆಗೆ ಬಂದು ಆಶೀರ್ವದಿಸಿದ್ದಕ್ಕೆ ವಂದನೆಯನ್ನು ತಿಳಿಸಿ ಕಾರ್ಯಕ್ರಮಕ್ಕೆ ಮಂಗಳವನ್ನಿತ್ತರು.
ಕಾರ್ಯಕ್ರಮದ ಬಳಿಕ ಶಾಲಗ್ರಾಮ ಶಿಲಾರೂಪಿ ಕೃಷ್ಣನ ಎದುರು ನಡೆದ ಭಜನೆ, ಚಾಮರ ಸೇವೆ, ಮಹಾಪೂಜೆ, ಶ್ರೀಗಳ ಆಶೀರ್ವಚನ, ತೀರ್ಥ ಮತ್ತು ಫಲ ಮಂತ್ರಾಕ್ಷತೆ ಬಳಿಕ ರಾತ್ರಿಯ ಭೋಜನ ಪ್ರಸಾದದ ಬಳಿಕ ನೆರೆದಿದ್ದ ಭಕ್ತರು ಪ್ರಸಾದವನ್ನು ಸ್ವೀಕರಿಸಿದರು .
ಮರುದಿನ ಬೆಳಿಗ್ಗೆ ಅಧಿಕ ಮಾಸ ಪ್ರಯುಕ್ತ ಅನೇಕ ಭಕ್ತರಿಗೆ ಶ್ರೀಗಳಿಂದ ತಪ್ತ ಮುದ್ರಾಧಾರಣೆ ನಡೆಯಿತು.

