ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಆಲ್‌ಸ್ಟಾಮ್ ಸಿಗ್ನಲಿಂಗ್ ತಂತ್ರಜ್ಞಾನ: ಸ್ವಯಂಚಾಲಿತ ರೈಲು ಸಂಚಾರಕ್ಕೆ ಚಾಲನೆ

0
1

ಬೆಂಗಳೂರು: ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ನ ರೀಚ್ 6 ಎತ್ತರಿಸಿದ ಆದ್ಯತಾ ವಿಭಾಗದಲ್ಲಿ ಆಲ್‌ಸ್ಟಾಮ್‌ನ ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ವಾಣಿಜ್ಯ ರೈಲು ಸಂಚಾರ ಆರಂಭಗೊಂಡಿದೆ. ಇದರಿಂದ ದಕ್ಷಿಣ ಬೆಂಗಳೂರಿನ ಮೆಟ್ರೋ ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ದೊರೆತಿದ್ದು, ಸುರಕ್ಷಿತ ಮತ್ತು ವೇಗದ ರೈಲು ಕಾರ್ಯಾಚರಣೆಗೆ ಹೊಸ ತಂತ್ರಜ್ಞಾನ ಲಭ್ಯವಾಗಿದೆ.

ಸ್ಮಾರ್ಟ್ ಮತ್ತು ಸುಸ್ಥಿರ ಸಂಚಾರ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆಯಾದ ಆಲ್‌ಸ್ಟಾಮ್, ನವೆಂಬರ್ 13ರಂದು ಈ ಮೈಲಿಗಲ್ಲನ್ನು ಪ್ರಕಟಿಸಿದೆ. 7.5 ಕಿ.ಮೀ. ಉದ್ದದ ಈ ಎತ್ತರಿಸಿದ ಮಾರ್ಗದಲ್ಲಿ ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ಸಿಗ್ನಲಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಈ ಮಾರ್ಗವು ಸ್ವಾಗತ್ ರಸ್ತೆ, ಜಯದೇವ ಆಸ್ಪತ್ರೆ, ಜೆ.ಪಿ. ನಗರ 4ನೇ ಹಂತ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಹುಳಿಮಾವು ಮತ್ತು ಗೊಟ್ಟಿಗೆರೆ ಸೇರಿದಂತೆ ಆರು ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ವಿಶೇಷವಾಗಿ ಜಯದೇವ ಆಸ್ಪತ್ರೆ ನಿಲ್ದಾಣವು ಹಳದಿ ಮಾರ್ಗದೊಂದಿಗೆ ಇಂಟರ್‌ಚೇಂಜ್ ಸೌಲಭ್ಯ ಹೊಂದಿದ್ದು, ದಕ್ಷಿಣ ಬೆಂಗಳೂರಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಚಾಲಕರ ಮೇಲ್ವಿಚಾರಣೆಯೊಂದಿಗೆ ಸ್ವಯಂಚಾಲಿತ ರೈಲು ಸಂಚಾರ

ಈ ವಿಭಾಗವು ಆಟೋಮ್ಯಾಟಿಕ್ ಟ್ರೈನ್ ಆಪರೇಷನ್ (ATO) ಹೊಂದಿರುವ ಗ್ರೇಡ್ ಆಫ್ ಆಟೋಮೇಷನ್ 2 (GoA2) ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿದೆ. ಈ ತಂತ್ರಜ್ಞಾನದಲ್ಲಿ ರೈಲಿನ ವೇಗವರ್ಧನೆ ಮತ್ತು ಬ್ರೇಕಿಂಗ್ ಪ್ರಕ್ರಿಯೆಗಳು ಸ್ವಯಂಚಾಲಿತವಾಗಿ ನಡೆಯಲಿದ್ದು, ಪ್ರಮುಖ ಕಾರ್ಯಾಚರಣೆಯ ಜವಾಬ್ದಾರಿಗಳು ಚಾಲಕರ ಮೇಲಿರುತ್ತವೆ.

ವಾಣಿಜ್ಯ ಸೇವೆಯ ಮೊದಲ ದಿನದಿಂದಲೇ ಈ ವ್ಯವಸ್ಥೆ ಕಾರ್ಯಾರಂಭಿಸಿರುವುದು ಭಾರತದ ಮೆಟ್ರೋ ಯೋಜನೆಯೊಂದರಲ್ಲಿ ಮಹತ್ವದ ಸಾಧನೆಯಾಗಿದೆ ಎಂದು ಆಲ್‌ಸ್ಟಾಮ್ ತಿಳಿಸಿದೆ.

ಯೋಜನೆಯ ಭಾಗವಾಗಿ ಕೊತ್ತನೂರು ಡಿಪೋ ಸಂಪೂರ್ಣವಾಗಿ ಕಾರ್ಯಾರಂಭಗೊಂಡಿದ್ದು, ಇಲ್ಲಿ ಆಟೋಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್ (ATP) ಮತ್ತು ATO ಸೌಲಭ್ಯ ಹೊಂದಿರುವ ಸಮಗ್ರ ಪರೀಕ್ಷಾ ಹಳಿಯನ್ನೂ ನಿರ್ಮಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನದಿಂದ ರೈಲು ಕಾರ್ಯಾಚರಣೆ ಮೇಲ್ವಿಚಾರಣೆ

ಆಲ್‌ಸ್ಟಾಮ್‌ನ ಸಿಗ್ನಲಿಂಗ್ ವ್ಯವಸ್ಥೆಯು ರೈಲುಗಳು ಮತ್ತು ಹಳಿಯ ಬದಿಯ ಉಪಕರಣಗಳ ನಡುವೆ ನಿರಂತರ ಸಂವಹನ ಕಲ್ಪಿಸುತ್ತದೆ. ಇದರಿಂದ ರೈಲುಗಳ ನಿಖರವಾದ ಸ್ಥಾನವನ್ನು ಗುರುತಿಸಿ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ನೆರವಾಗುತ್ತದೆ.

ಬೈಯಪ್ಪನಹಳ್ಳಿಯ ಕಾರ್ಯಾಚರಣೆ ನಿಯಂತ್ರಣ ಕೇಂದ್ರದಿಂದ ಅರ್ಬಲಿಸ್ ವಿಷನ್ ಪ್ಲಾಟ್‌ಫಾರ್ಮ್ ಮೂಲಕ ರೈಲು ಸಂಚಾರದ ಮೇಲ್ವಿಚಾರಣೆ ನಡೆಸಲಾಗುತ್ತದೆ. ಇದರೊಂದಿಗೆ ಆಲ್‌ಸ್ಟಾಮ್‌ನ ಹೆಲ್ತ್‌ಹಬ್ ಮುನ್ಸೂಚಕ ನಿರ್ವಹಣಾ ವ್ಯವಸ್ಥೆಯು ಸಿಗ್ನಲಿಂಗ್ ಉಪಕರಣಗಳ ಸ್ಥಿತಿಗತಿಯನ್ನು ನೈಜ ಸಮಯದಲ್ಲಿ ಪರಿಶೀಲಿಸುತ್ತದೆ. ಇದರಿಂದ ತಾಂತ್ರಿಕ ಅಡಚಣೆಗಳನ್ನು ಕಡಿಮೆ ಮಾಡಲು ಹಾಗೂ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ಸಹಾಯವಾಗಲಿದೆ.

ಬೆಂಗಳೂರು ಮೆಟ್ರೋದೊಂದಿಗೆ ಆಲ್‌ಸ್ಟಾಮ್‌ನ ದೀರ್ಘಕಾಲದ ಒಡನಾಟ

ಈ ಯೋಜನೆಯು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಆಲ್‌ಸ್ಟಾಮ್ ನಡುವಿನ ದೀರ್ಘಕಾಲದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದೆ.

2009ರಿಂದ 2017ರ ಅವಧಿಯಲ್ಲಿ ಮೆಟ್ರೋದ ಮೊದಲನೇ ಹಂತದ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಿಗೆ ಸಿಗ್ನಲಿಂಗ್ ವ್ಯವಸ್ಥೆ ಒದಗಿಸಲಾಗಿತ್ತು. ಎರಡನೇ ಹಂತದ ಯೋಜನೆಯಲ್ಲಿ ಟ್ರಾಕ್ಷನ್ ಮತ್ತು ವಿದ್ಯುತ್ ಸರಬರಾಜು ವಿದ್ಯುದೀಕರಣ ಕಾರ್ಯವೂ ಪ್ರಗತಿಯಲ್ಲಿದೆ. ಪಿಂಕ್ ಲೈನ್ ಯೋಜನೆಯು ಬಿಎಂಆರ್‌ಸಿಎಲ್‌ನೊಂದಿಗೆ ಆಲ್‌ಸ್ಟಾಮ್‌ನ ಮೂರನೇ ಒಪ್ಪಂದವಾಗಿದೆ.

ಈ ಕುರಿತು ಮಾತನಾಡಿದ ಆಲ್‌ಸ್ಟಾಮ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್ ಲೋಯಿಸನ್, ಬೆಂಗಳೂರು ಮೆಟ್ರೋದ ಪಿಂಕ್ ಲೈನ್‌ಗೆ ತಮ್ಮ ಸಂಸ್ಥೆಯ ಸಿಬಿಟಿಸಿ ತಂತ್ರಜ್ಞಾನ ಶಕ್ತಿ ತುಂಬುತ್ತಿರುವುದು ಹೆಮ್ಮೆಯ ಸಂಗತಿ. ನಗರವು ಸುಸ್ಥಿರ ಹಾಗೂ ಉತ್ತಮ ಸಂಪರ್ಕ ಹೊಂದಿರುವ ಭವಿಷ್ಯದತ್ತ ಸಾಗಲು ವಿಶ್ವದರ್ಜೆಯ ಮತ್ತು ವಿಶ್ವಾಸಾರ್ಹ ಸಿಗ್ನಲಿಂಗ್ ಪರಿಹಾರಗಳನ್ನು ಒದಗಿಸುವುದು ಸಂಸ್ಥೆಯ ಬದ್ಧತೆಯಾಗಿದೆ ಎಂದು ತಿಳಿಸಿದರು.

ಜಾಗತಿಕವಾಗಿ 190 ಮೆಟ್ರೋ ಮಾರ್ಗಗಳಲ್ಲಿ ಆಲ್‌ಸ್ಟಾಮ್‌ನ ಪರಿಹಾರಗಳು ಆಯ್ಕೆಯಾಗಿದ್ದು, ಭಾರತದಲ್ಲಿಯೂ 18 ಮೆಟ್ರೋ ಮಾರ್ಗಗಳಲ್ಲಿ ಅಳವಡಿಕೆಯಾಗಿವೆ ಅಥವಾ ಪ್ರಗತಿಯಲ್ಲಿವೆ. ಈ ಮೂಲಕ ಭಾರತದ ನಗರ ಸಾರಿಗೆ ವ್ಯವಸ್ಥೆಯ ಆಧುನೀಕರಣಕ್ಕೆ ಸಂಸ್ಥೆ ತನ್ನ ಕೊಡುಗೆಯನ್ನು ಮುಂದುವರಿಸಿದೆ.