
ಉಡುಪಿ : ಅಂಬಲಪಾಡಿಯಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ಬಂಧಿಸಿ, ಒಟ್ಟು 4.50 ಲಕ್ಷ ರೂ. ಮೌಲ್ಯದ ನಗದು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮೊಹಮ್ಮದ್ ಜಾಫರ್ (22) ಮತ್ತು ಕದೀರ್ (32) ಬಂಧಿತ ಆರೋಪಿಗಳು.
ಜುಲೈ 1ರಿಂದ 9ರ ನಡುವಿನ ಅವಧಿಯಲ್ಲಿ ಎ.ಎಸ್. ರಾಮಮೂರ್ತಿ ಎಂಬವರ ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆಯ ಸಹಾರಾ ಅಪಾರ್ಟ್ಮೆಂಟ್ ಬಳಿಯ ಮನೆಗೆ ನುಗ್ಗಿದ್ದ ಕಳ್ಳರು, 6 ಲಕ್ಷ ರೂ. ನಗದು ಹಾಗೂ 10 ಸಾವಿರ ರೂ. ಮೌಲ್ಯದ ಮೂರು ವಾಚ್ಗಳನ್ನು ಕಳವು ಮಾಡಿದ್ದರು. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಸೆ.25ರಂದು ಮೂಡಬಿದ್ರೆಯಲ್ಲಿ ಆರೋಪಿ ಕದೀರ್ನನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ 1.65 ಲಕ್ಷ ರೂ. ನಗದು, ಎರಡು ಬೆಳ್ಳಿ ನಾಣ್ಯಗಳು, ಐದು ವಾಚ್ಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಸ್ಕ್ರೂಡ್ರೈವರ್ಗಳು ಸೇರಿದಂತೆ ಒಟ್ಟು 4,50,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಲವು ಪ್ರಕರಣಗಳಲ್ಲಿ ಆರೋಪಿಗಳು
ಪೊಲೀಸರ ಪ್ರಕಾರ, ಬಂಧಿತ ಆರೋಪಿಗಳಿಬ್ಬರೂ ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಸದಸ್ಯರು. ಮೊಹಮ್ಮದ್ ಜಾಫರ್ ವಿರುದ್ಧ ಉತ್ತರಾಖಂಡದ ನೈನಿತಾಲ್ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿದೆ.
ಕದೀರ್ ವಿರುದ್ಧ ಉತ್ತರ ಪ್ರದೇಶದ ಬನಿಯಾಟೇರ್ ಪೊಲೀಸ್ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹಾಗೂ ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಮುರಾದಾಬಾದ್ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿಯೂ ಅಕ್ರಮ ಶಸ್ತ್ರಾಸ್ತ್ರ ಮತ್ತು ಮನೆ ಕಳವು ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತಂಡದಿಂದ ಕಾರ್ಯಾಚರಣೆ
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಪೊಲೀಸ್ ಉಪನಿರೀಕ್ಷಕ ರತ್ನಾಕರ್ ಕೆ., ಎಎಸ್ಐ ಹರೀಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
