ವೈದ್ಯಕೀಯ ಲೋಕವನ್ನೇ ಅಚ್ಚರಿಗೆ ತಳ್ಳಿದ ಘಟನೆ; ‘ಮೃತ’ ವ್ಯಕ್ತಿ ಮತ್ತೆ ಬದುಕಿಬಂದ!

0
5

Polandನ ಕಮಿಯೆನ್ನಾ ಗೋರಾ ಪಟ್ಟಣದಲ್ಲಿ ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಕಮಿಲ್ ಎಂಬ 25 ವರ್ಷದ ಯುವಕನನ್ನು ವೈದ್ಯರು ‘ಹೃದಯಾಘಾತದಿಂದ ಮೃತಪಟ್ಟಿದ್ದಾನೆ’ ಎಂದು ಘೋಷಿಸಿದ ಕೆಲ ಗಂಟೆಗಳಲ್ಲೇ ಆತ ಶವಾಗಾರದ ಫ್ರೀಜರ್‌ನೊಳಗೆ ಜೀವಂತವಾಗಿ ಪತ್ತೆಯಾಗಿದ್ದಾನೆ.

ಕಮಿಲ್ ತನ್ನ ಗೆಳೆಯರೊಂದಿಗೆ ಪಾರ್ಟಿಗೆ ತೆರಳಿದ್ದ ವೇಳೆ ಅತಿಯಾದ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಆತ ಕುಸಿದು ಬಿದ್ದಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಉಸಿರಾಟ ಹಾಗೂ ನಾಡಿಮಿಡಿತ ಕಾಣಿಸದ ಹಿನ್ನೆಲೆಯಲ್ಲಿ ಆತನನ್ನು ಮೃತ ಎಂದು ಘೋಷಿಸಿದ್ದರು.

ನಂತರ ಆತನ ದೇಹವನ್ನು ಆಸ್ಪತ್ರೆಯ ಶವಾಗಾರದ ಕೋಲ್ಡ್ ಸ್ಟೋರೇಜ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ರಾತ್ರಿ ವೇಳೆ ಫ್ರೀಜರ್‌ನೊಳಗಿಂದ ವಿಚಿತ್ರ ಶಬ್ದಗಳು ಕೇಳಿಬಂದ ಹಿನ್ನೆಲೆ ಭದ್ರತಾ ಸಿಬ್ಬಂದಿ ಬಾಗಿಲು ತೆರೆಯುವಾಗ, ‘ಸತ್ತಿದ್ದ’ ಕಮಿಲ್ ನಡುಗುತ್ತಾ ಕುಳಿತಿರುವ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.

ವೈದ್ಯರ ಪ್ರಕಾರ, ಅತಿಯಾದ ಮದ್ಯ ಸೇವನೆಯಿಂದ ದೇಹದ ಉಷ್ಣಾಂಶ ತೀವ್ರವಾಗಿ ಕುಸಿದು, ನಾಡಿಮಿಡಿತ ಬಹಳ ನಿಧಾನಗೊಳ್ಳಬಹುದು. ಕೆಲ ಸಂದರ್ಭಗಳಲ್ಲಿ ದೇಹದ ಅಂಗಾಂಗಗಳ ಚಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಂತೆ ಕಾಣುವ “Suspended Animation” ಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಜೀವಂತ ವ್ಯಕ್ತಿಯನ್ನೇ ಮೃತ ಎಂದು ತಪ್ಪಾಗಿ ಅಂದಾಜಿಸುವ ಸಂಭವವೂ ಇರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಘಟನೆಯ ಮತ್ತೊಂದು ಆಘಾತಕಾರಿ ಅಂಶವೆಂದರೆ, ಶವಾಗಾರದಿಂದ ಜೀವಂತವಾಗಿ ಹೊರಬಂದ ಬಳಿಕವೂ ಕಮಿಲ್ ಮನೆಗೆ ತೆರಳದೇ ಮತ್ತೆ ಪಬ್‌ಗೆ ಹೋಗಿ ಮದ್ಯ ಸೇವನೆ ಮುಂದುವರಿಸಿದ್ದಾನೆ ಎನ್ನಲಾಗಿದೆ.

ಈ ಘಟನೆ ಮದ್ಯದ ಅತಿಯಾದ ವ್ಯಸನ ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ನೆನಪಿಸುವಂತಿದೆ.

LEAVE A REPLY

Please enter your comment!
Please enter your name here