ಕಡಂದಲೆ–ಪಾಲಡ್ಕದಲ್ಲಿ ವಿಜೃಂಭಣೆಯಿಂದ ವಾರ್ಷಿಕ ಗುರುಪೂಜೆ

0
26

ಮಹಿಳಾ ಘಟಕದ ವತಿಯಿಂದ ಧಾರ್ಮಿಕ ಕಾರ್ಯಕ್ರಮ – ನೂರಾರು ಭಕ್ತರು ಭಾಗಿ

ಕಡಂದಲೆ: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ (ರಿ.), ಕಡಂದಲೆ–ಪಾಲಡ್ಕ ಇದರ ಮಹಿಳಾ ಘಟಕದ ವತಿಯಿಂದ ವಾರ್ಷಿಕ ಗುರುಪೂಜಾ ಕಾರ್ಯಕ್ರಮವು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ವಿಜೃಂಭಣೆಯಿಂದ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ಕೃಪೆಗೆ ಪಾತ್ರರಾದರು.

ಗುರುಪೂಜೆಯ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು. ಪೂಜಾ ಕಾರ್ಯಕ್ರಮದ ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ಮಹಿಳಾ ಘಟಕದ ಸದಸ್ಯರು ಕಾರ್ಯಕ್ರಮದ ಆಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಲೀಲಾಧರ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಗಣೇಶ್ ಕೋಟ್ಯಾನ್ ಹಾಗೂ ಇಂದಿನ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಅರ್ಚಕರು , ಸೇವಾದಳದ ಅಧ್ಯಕ್ಷ ಸೀತಾರಾಮ್ ಸಾಲ್ಯಾನ್ ಸೇರಿದಂತೆ ಸಂಘದ ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಾರಾಯಣ ಗುರುಗಳ ತತ್ವಾದರ್ಶಗಳ ಸ್ಮರಣೆ

ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರು ಸಮಾಜದಲ್ಲಿ ಸಮಾನತೆ, ಮಾನವೀಯತೆ, ಶಿಕ್ಷಣ, ಸ್ವಾಭಿಮಾನ ಹಾಗೂ ಸಹೋದರತ್ವದ ಸಂದೇಶವನ್ನು ಸಾರಿದ ಮಹಾನ್ ಸಮಾಜ ಸುಧಾರಕರು. ಜಾತಿ-ಮತಗಳ ಭೇದಭಾವವನ್ನು ಮೀರಿ ಮನುಷ್ಯರೆಲ್ಲರೂ ಸಮಾನರು ಎಂಬ ಉದಾತ್ತ ಚಿಂತನೆಯೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದರು.
“ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮನುಷ್ಯನಿಗೆ” ಎಂಬ ಅವರ ಸಂದೇಶವು ಮಾನವಕುಲದ ಏಕತೆ ಮತ್ತು ಸಮಾನತೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಣದ ಮೂಲಕ ಪ್ರಗತಿ ಸಾಧಿಸಬೇಕು, ಸಂಘಟನೆಯ ಮೂಲಕ ಬಲಿಷ್ಠರಾಗಬೇಕು ಹಾಗೂ ಉತ್ತಮ ಚಿಂತನೆ ಮತ್ತು ಸತ್ಕಾರ್ಯಗಳ ಮೂಲಕ ಬದುಕನ್ನು ಉನ್ನತೀಕರಿಸಬೇಕು ಎಂಬುದು ಅವರ ತತ್ವಾದರ್ಶಗಳ ಸಾರವಾಗಿದೆ.

ನಾರಾಯಣ ಗುರುಗಳ ಈ ಉದಾತ್ತ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯ, ಪ್ರೀತಿ, ಸಹಬಾಳ್ವೆ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಗುರುಪೂಜಾ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ.

ವರದಿ :ಜಗದೀಶ ಪೂಜಾರಿ , ಕಡಂದಲೆ