ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 5,431 ಹುದ್ದೆಗಳಿಗೆ KEA ಅರ್ಜಿ ಆಹ್ವಾನ!

0
12

ರಾಜ್ಯದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ 33 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಸಹಾಯಕ (FDC) ಹಾಗೂ ದ್ವಿತೀಯ ದರ್ಜೆ ಸಹಾಯಕ (SDC) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.

ನೇಮಕಾತಿಗೆ ಸಂಬಂಧಿಸಿದಂತೆ ಅಕ್ಟೋಬರ್ 31ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ನವೆಂಬರ್ 26ರೊಳಗೆ ಅರ್ಜಿ ಶುಲ್ಕ ಪಾವತಿಸಬೇಕಾಗಿದೆ.

ಹುದ್ದೆಗಳ ವಿವರ:

ಒಟ್ಟು 5,431 ಹುದ್ದೆಗಳನ್ನು ಎರಡು ವೃಂದಗಳಲ್ಲಿ ಭರ್ತಿ ಮಾಡಲಾಗುತ್ತದೆ.

  • ಉಳಿಕೆ ಮೂಲ ವೃಂದ: 2,163 FDC ಹಾಗೂ 2,070 SDC ಹುದ್ದೆಗಳು.
  • ಕಲ್ಯಾಣ ಕರ್ನಾಟಕ ವೃಂದ: 563 FDC ಹಾಗೂ 635 SDC ಹುದ್ದೆಗಳು.

ಜನವರಿಯಲ್ಲಿ ನೇಮಕಾತಿ ಪರೀಕ್ಷೆ

ಅಧಿಸೂಚನೆಯ ಪ್ರಕಾರ, ನೇಮಕಾತಿ ಪರೀಕ್ಷೆಗಳನ್ನು 2027ರ ಜನವರಿ 8, 9, 10, 16 ಮತ್ತು 17ರಂದು ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯ ವೇಳಾಪಟ್ಟಿ ಹಾಗೂ ಇತರ ಅಗತ್ಯ ಮಾಹಿತಿಗಳನ್ನು KEA ಪ್ರಕಟಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಉದ್ಯೋಗ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೇಮಕಾತಿಯ ಸಂಪೂರ್ಣ ಅಧಿಸೂಚನೆಯನ್ನು ಪರಿಶೀಲಿಸಿ, ಅರ್ಹತೆ ಹಾಗೂ ಅಗತ್ಯ ದಾಖಲೆಗಳನ್ನು ಖಚಿತಪಡಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಐಎಎಸ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.