ಜೀನತ್​ ವಿರುದ್ಧ ಮತ್ತೊಂದು ದೂರು ದಾಖಲು

0
16

ಉಡುಪಿ: ಅಲ್ಪಸಂಖ್ಯಾತರ ಯೋಜನೆಯಡಿ 2 ಕೋಟಿ ರೂ. ಸಾಲ ಮಂಜೂರಾಗಲಿದ್ದು, ನಂತರ ಸಾಲ ಮರುಪಾವತಿ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಸುಮಾರು 148 ಗ್ರಾಂ ಚಿನ್ನಾಭರಣ ಅಡಮಾನ ಇರಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆರ್ಗಾ ಗ್ರಾಮದ ತ್ರಿಶಂಕು ನಗರದ ನಿವಾಸಿ ಮೋಹಿನಿ ಶೆಟ್ಟಿಗಾರ್​ ವಂಚನೆಗೊಳಗಾದವರು. ಇವರಿಗೆ ಪರಿಚಯಸ್ಥರಾಗಿದ್ದ ಜೀನತ್​ ಎಂಬಾಕೆ 2020ರಲ್ಲಿ ತುರ್ತಾಗಿ 50 ಲಕ್ಷ ರೂ. ಹಣದ ಅವಶ್ಯಕತೆ ಇದೆ. ತನಗೆ ಅಲ್ಪಸಂಖ್ಯಾತರ ಯೋಜನೆಯಡಿ 2 ಕೋಟಿ ರೂ. ಸಾಲ ಮಂಜೂರಾಗಲಿದ್ದು, ಸಾಲದ ಹಣ ಕೈ ಸೇರಿದ ತಕ್ಷಣ ಒಂದು ವರ್ಷದೊಳಗೆ ನಿಮ್ಮ ಹಣ ಹಾಗೂ ಚಿನ್ನವನ್ನು ಹಿಂತಿರುಗಿಸುವುದಾಗಿ ನಂಬಿಸಿದ್ದಳು. ಇದನ್ನು ಸತ್ಯವೆಂದು ನಂಬಿದ ಮೋಹಿನಿ ಅವರು, 2020ರ ಆಗಸ್ಟ್​ ಮತ್ತು ಅಕ್ಟೋಬರ್​ ತಿಂಗಳಲ್ಲಿ ತನ್ನ ಬಳಿಯಿದ್ದ ಸುಮಾರು 148 ಗ್ರಾಂ ಚಿನ್ನಾಭರಣಗಳನ್ನು (ಅಂದಾಜು ಮೌಲ್ಯ 22 ಲಕ್ಷ ರೂ.) ಸುಧೀಂದ್ರ ಫೈನಾನ್ಸ್​ನಲ್ಲಿ ಅಡವಿಟ್ಟು 4,36,000 ರೂ. ಹಣವನ್ನು ಜೀನತ್​ಗೆ ನೀಡಿದ್ದರು. ಹಣ ಪಡೆದ ಬಳಿಕ ಸುಮಾರು ಒಂದೂವರೆ ವರ್ಷದವರೆಗೆ ಜೀನತ್​ ಸಾಲದ ಕಂತನ್ನು ಕಟ್ಟುತ್ತಾ ಬಂದಿದ್ದಳು. ಆದರೆ ಆ ಬಳಿಕ ಸಾಲದ ಕಂತನ್ನೂ ಕಟ್ಟದೆ, ಚಿನ್ನವನ್ನೂ ಹಿಂತಿರುಗಿಸದೇ ಸತಾಯಿಸಿದ್ದಾಳೆ. ಇದರಿಂದ ಬೇಸತ್ತ ಮೋಹಿನಿ ಜೀನತ್​ ಮನೆಗೆ ಹೋಗಿ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here