ಮಂಗಳೂರು: ಕರಾವಳಿಯ ರಂಗಭೂಮಿಯಲ್ಲಿ ಹೊಸ ಅಧ್ಯಾಯ ಬರೆಯುವ ಮಹತ್ವಾಕಾಂಕ್ಷೆಯೊಂದಿಗೆ ಟೀಮ್ ಲಕುಮಿ ತಂಡದ ಕುಶಲ ಕಲಾವಿದರು ಕುಡ್ಲ ಹೆಮ್ಮೆಯಿಂದ ‘ಚಂದ್ರಾವತಿ’ ನಾಟಕವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.
ಕಲೆಗೆ ಜೀವ ನೀಡಿ, ರಂಗಭೂಮಿಯನ್ನು ದೇವಾಲಯವೆಂದು ನಂಬಿರುವ ಕಲಾವಿದರ ಪರಿಶ್ರಮ, ಸಮರ್ಪಣೆ ಮತ್ತು ಕನಸುಗಳ ಸಾಕಾರ ರೂಪವೇ ‘ಚಂದ್ರಾವತಿ’ ಎಂದು ತಂಡ ತಿಳಿಸಿದೆ. ಪ್ರೀತಿ, ತ್ಯಾಗ, ಕುಟುಂಬ, ನಂಬಿಕೆ, ಮೋಸ, ಹೋರಾಟ, ನೋವು, ಸಂತೋಷ ಹಾಗೂ ಬದುಕಿನ ಅನೇಕ ಆಯಾಮಗಳನ್ನು ಒಳಗೊಂಡ ಈ ನಾಟಕ ಪ್ರೇಕ್ಷಕರ ಮನಸ್ಸನ್ನು ಮುಟ್ಟುವ ಭಾವನಾತ್ಮಕ ಕಥಾಹಂದರವನ್ನು ಹೊಂದಿದೆ.
ಅತ್ಯಾಧುನಿಕ ರಂಗಸಜ್ಜಿಕೆ, ಭವ್ಯ ಬೆಳಕು ಮತ್ತು ಧ್ವನಿ ವಿನ್ಯಾಸ, ಮನಮುಟ್ಟುವ ಸಂಗೀತ, ಕಲಾತ್ಮಕ ನಿರ್ದೇಶನ ಹಾಗೂ ಅದ್ಭುತ ಅಭಿನಯದ ಮೂಲಕ ಪ್ರತಿ ದೃಶ್ಯವನ್ನೂ ಜೀವಂತಗೊಳಿಸುವ ಪ್ರಯತ್ನವನ್ನು ತಂಡ ಕೈಗೊಂಡಿದೆ. ಆರಂಭದಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ರಂಗಭೂಮಿಯೊಂದಿಗೆ ಬೆಸೆದು ಇಡುವಂತಹ ಪ್ರದರ್ಶನ ನೀಡುವ ವಿಶ್ವಾಸವನ್ನು ತಂಡ ವ್ಯಕ್ತಪಡಿಸಿದೆ.
ನಾಟಕದ ಕಥೆಯನ್ನು ತುಳಸಿದಾಸ್ ಮಂಜೇಶ್ವರ ರಚಿಸಿದ್ದು, ಲಯನ್ ಕುಶೋರ್ ಡಿ. ಶೆಟ್ಟಿ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ತುಳುನಾಡಿನ ಜನಪ್ರಿಯ ಕಲಾವಿದ ಅರವಿಂದ್ ಬೋಳಾರ್ ಅವರ ವಿಶೇಷ ಅಭಿನಯ ಈ ನಾಟಕದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
ರಂಗಭೂಮಿ ಪ್ರೇಮಿಗಳಲ್ಲಿ ಈಗಾಗಲೇ ‘ಚಂದ್ರವತಿ’ ನಾಟಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಕರಾವಳಿಯ ರಂಗಭೂಮಿಗೆ ಹೊಸ ಮೈಲಿಗಲ್ಲಾಗುವ ವಿಶ್ವಾಸ ವ್ಯಕ್ತವಾಗಿದೆ.

