ಬೆಂಗಳೂರು: ರೀಲ್ಸ್ ಇಂದಿನ ಸಮಾಜದಲ್ಲಿ ಒಂದು ಟ್ರೆಂಡ್ ಆಗಿದ್ದು, ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ಗಳು ಇರುವುದರಿಂದ ರಾತ್ರೋರಾತ್ರಿ ಸ್ಟಾರ್’ಗಳಾಗಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಮಾಧ್ಯಮವನ್ನ ವಿಪರೀತವಾಗಿ ಬಳಸುತ್ತಿದ್ದಾರೆ. ನಾವು ಎಲ್ಲಿದ್ದೇವೆ..? ನಾವು ಏನು ಮಾಡುತ್ತಿದ್ದೇವೆ.? ಅನ್ನೋದನ್ನ ಮರೆತು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಅಪಾಯಕಾರಿ ಸಾಹಸಗಳನ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರೀಲ್ಸ್ ಮಾಡುವಾಗ 13ನೇ ಮಹಡಿಯಿಂದ ಬಿದ್ದು 20 ವರ್ಷದ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ಯುವತಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದಳು. ಪಾರ್ಟಿಯ ಮಧ್ಯದಲ್ಲಿ, ಯುವತಿ ರೀಲ್ಸ್ ಮಾಡಲು ಟೆರೇಸ್’ಗೆ ಹೋದಳು. ವಿಡಿಯೋ (ಚಿತ್ರೀಕರಣ ರೀಲ್) ತೆಗೆದುಕೊಳ್ಳುವಾಗ, ಆಕೆ ಕಾಲು ಜಾರಿ 13ನೇ ಮಹಡಿಯಿಂದ ಬಿದ್ದಿದ್ದಾಳೆ. ಘಟನೆಯಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದಳು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಯುವತಿಯ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು. ಮೃತಳನ್ನ ಬಿಹಾರದ ಯುವತಿ ಎಂದು ಗುರುತಿಸಲಾಗಿದ್ದು, ನಗರದ ಶಾಪಿಂಗ್ ಮಾರ್ಟ್’ನಲ್ಲಿ ಕೆಲಸ ಮಾಡುತ್ತಿದ್ದಳು. ಘಟನೆಯ ಬಗ್ಗೆ ಅಸ್ವಾಭಾವಿಕ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.