ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಳವಳ್ಳಿಯಲ್ಲಿ ನಡೆದಿದೆ. ಹಳವಳ್ಳಿಯ ಶ್ರೀಕಾಂತ್ ಹೆಬ್ಬಾರ್ ಪುತ್ರಿ ಸಾಧ್ವಿ (2) ಮೃತ ಮಗು.
ಇಂದು ಬೆಳಗ್ಗೆ ತಂದೆ ಶ್ರೀಕಾಂತ್ ಹೆಬ್ಬಾರ್ ಅವರ ಜೊತೆ ಎರಡು ವರ್ಷದ ಮಗಳು ಸಾಧ್ವಿ ದನದ ಕೊಟ್ಟಿಗೆ ಬಳಿ ತೆರಳಿದ್ದಳು. ತಂದೆ ಕೊಟ್ಟಿಗೆ ಕೆಲಸ ಮಾಡುವಾಗ ಮಗು ಪಕ್ಕದಲ್ಲೇ ಆಡುತ್ತಿತ್ತು. ತಂದೆ ಕೆಲಸದಲ್ಲಿ ಮಗ್ನರಾಗಿದ್ದಾಗ ವೇಳೆ ಮಗು ಆಯತಪ್ಪಿ ಗೊಬ್ಬರದ ಗುಂಡಿಗೆ ಬಿದ್ದಿದೆ.
ಗೊಬ್ಬರದ ನೀರಿನಲ್ಲಿ ಮಗು ಮುಳುಗಿದ್ದು, ತಂದೆ ಹುಡುಕಿದಾಗ ಮಗು ಗೊಬ್ಬರದ ಗುಂಡಿಗೆ ಬಿದ್ದಿರುವುದು ತಿಳಿದು ಬಂದಿದೆ. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೋಗುವಷ್ಟರಲ್ಲಿ ಸಾಧ್ವಿ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.