
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ 22ನೆಯ ವರ್ಷದ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯರು ಉದ್ಘಾಟಿಸಿ ವಿದ್ಯಾಧಾನ, ಅನ್ನದಾನ, ಅಭಯದಾನ, ಔಷಧ ದಾನ ಇದನ್ನು ಯಕ್ಷಗಾನ ಕಲಾರಂಗ ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದೆ ಎಂದು ಹೇಳಿದರು. ಅನುಗ್ರಹ ಸಂದೇಶ ನೀಡಿದ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಯಾರಿಗೆ ಯಾವಾಗ ಏನು ಬೇಕು ಎಂಬುದನ್ನು ತಿಳಿದು ನೀಡುವುದನ್ನು ಯಕ್ಷಗಾನ ಕಲಾರಂಗ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ತಲುಪಿಸುತ್ತಿದೆ ಎಂದರು.ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಕಾರ್ಯದರ್ಶಿ ಡಾ. ನಾರಾಯಣ ಸಭಾಹಿತರು ಮಾತನಾಡಿ ಮಾಹೆಯ ವರಿಷ್ಠರು ಮಣಿಪಾಲ ಆರೋಗ್ಯ ಕಾರ್ಡನ್ನು ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಿಸಿ, ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಅತ್ಯಂತ ಸಂತುಷ್ಟರಾಗಿ ಯಕ್ಷಗಾನ ಕಲಾರಂಗಕ್ಕೆ ವಿವಿಧ ರೀತಿಯಲ್ಲಿ ಸಹಾಯಮಾಡುತ್ತಾ ಬಂದಿದ್ದಾರೆ.

ಅವನ್ನೆಲ್ಲಾ ಮುಂದುವರಿಸಲಿದ್ದಾರೆ ಎಂದರು. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವರು ಕಲಾರಂಗದ ಶಿಕ್ಷಣ ಮತ್ತು ಸಮಾಜಪರ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶುಭಾಶಂಸನೆಗೈದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್, ಶಿವಮೊಗ್ಗದ ಮಾಜಿ ರೋಟರಿ ಜಿಲ್ಲಾ (3182) ಗವರ್ನರ್ ಡಾ. ಪಿ. ನಾರಾಯಣ, ಉಡುಪಿ ಆದರ್ಶ ಆಸ್ಪತ್ರೆಯ ಡಾ. ಜಿ. ಎಸ್. ಚಂದ್ರಶೇಖರ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಗೋವಾ ಒಎನ್ಜಿಸಿಯ ನಿವೃತ್ತ ಸಿಜಿಎಂ. ಬನ್ನಾಡಿ ನಾರಾಯಣ ಆಚಾರ್, ಮಂಗಳೂರಿನ ಖ್ಯಾತ ವೈದ್ಯ ಡಾ. ಜೆ. ಎನ್. ಭಟ್, ಯು.ಎಸ್.ಎ.ಯ ಶಿಕ್ಷಣ ತಜ್ಞ ಡಾ. ಸುದರ್ಶನ ಮೂರ್ತಿ, ಹುಬ್ಬಳ್ಳಿ ಮೈಲೈಫ್ನ ಸಂಸ್ಥಾಪಕ ಪ್ರವೀಣ್ ವಿ. ಗುಡಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಚೆನ್ನೈನ ಕೆ. ಅಣ್ಣಾಮಲೈಯವರು ಪ್ರತೀ ವರ್ಷ ನೀಡುತ್ತಿರುವ ರೂ. 25000/- ನೆರವನ್ನು ಬೈಂದೂರು ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಯು. ಉಪೇಂದ್ರ ಅವರ ನೆನಪಿನಲ್ಲಿ ಉತ್ತಮ ಕಡತ ನಿರ್ವಹಣೆಗೆ ನೀಡುವ ಹಾಗೂ ಅಕ್ಷತಾ ದೇವಾಡಿಗ ಇವಳ ಸ್ಮರಣಾರ್ಥ ಉತ್ತಮ ಪತ್ರ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್ ಶ್ರೀಗಳಿಗೆ ಫಲ ಸಮಿರ್ಪಿಸಿದರು, ವಿ. ಜಿ. ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ವಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತರಿದ್ದರು. ನಾರಾಯಣ ಎಂ. ಹೆಗಡೆ ಸಹಕರಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
