ಗರ್ಭದಿಂದ ಶಿಶುವನ್ನು ಬಲವಾಗಿ ಎಳೆದ ಆಶಾ ಕಾರ್ಯಕರ್ತೆ – ಮಗು ಎರಡು ತುಂಡು, ತಲೆ ಒಳಗೆ ಉಳಿದು ಆತಂಕ..!

0
10

ಬಸ್ತಿ : ವೈದ್ಯಕೀಯ ಲೋಕವೇ ತಲೆತಗ್ಗಿಸುವಂತಹ, ಮನುಕುಲವೇ ಬೆಚ್ಚಿಬೀಳುವಂತಹ ಘೋರ ಘಟನೆಯೊಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಆಂಬ್ಯುಲೆನ್ಸ್ ಸಿಬ್ಬಂದಿಯ ಅತಿಯಾದ ಆತ್ಮವಿಶ್ವಾಸ ಮತ್ತು ಅಮಾನವೀಯ ನಿರ್ಲಕ್ಷ್ಯಕ್ಕೆ ಏಳು ತಿಂಗಳ ಹಸುಗೂಸು ಬಲಿಯಾಗಿದ್ದಲ್ಲದೆ, ಮಗುವಿನ ಕತ್ತರಿಸಿದ ತಲೆ ತಾಯಿಯ ಗರ್ಭದಲ್ಲೇ ಉಳಿದ ಭೀಕರ ಘಟನೆ ಸಂಭವಿಸಿದೆ.

ಏಳು ತಿಂಗಳ ಗರ್ಭಿಣಿ ಪ್ರೇಮಾ ದೇವಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಕುದ್ರಾಹಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು. ಆಸ್ಪತ್ರೆಗೆ ತಲುಪಲು ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ, ಮಹಿಳೆಯ ನೋವು ತೀವ್ರಗೊಂಡಿದೆ.

ಆಂಬ್ಯುಲೆನ್ಸ್‌ನಲ್ಲಿದ್ದ ಆಶಾ ಕಾರ್ಯಕರ್ತೆ, ವೈದ್ಯರಿಗಾಗಿ ಕಾಯುವ ಬದಲು ತಾನೇ ಹೆರಿಗೆ ಮಾಡಿಸಲು ಮುಂದಾಗಿದ್ದಾಳೆ. ಮಹಿಳೆಗೆ ನೋವು ನಿವಾರಕ ಇಂಜೆಕ್ಷನ್ ನೀಡಿ, ಬಲವಂತವಾಗಿ ಸಾಮಾನ್ಯ ಹೆರಿಗೆ ಮಾಡಲು ಪ್ರಯತ್ನಿಸಿದ್ದಾಳೆ. ಈ ಸಂದರ್ಭದಲ್ಲಿ ಮಗುವಿನ ದೇಹ ಹೊರಬಂದರೂ, ತಲೆ ಮಾತ್ರ ಗರ್ಭದ ಒಳಗೇ ಸಿಲುಕಿಕೊಂಡಿದೆ. ಸಿಬ್ಬಂದಿ ಬಲವಂತವಾಗಿ ಎಳೆದ ಪರಿಣಾಮ, ಮಗುವಿನ ದೇಹ ಮತ್ತು ತಲೆ ಬೇರ್ಪಟ್ಟು, ದೇಹ ಮಾತ್ರ ಕೈಗೆ ಬಂದಿದೆ!

ತಮ್ಮ ತಪ್ಪಿನಿಂದ ಮಗು ಸಾವನ್ನಪ್ಪಿದ್ದನ್ನು ಕಂಡು ಭಯಭೀತರಾದ ಆರೋಗ್ಯ ಕಾರ್ಯಕರ್ತರು, ಸತ್ಯವನ್ನು ಮರೆಮಾಚಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ಅವರನ್ನು ಜಿಲ್ಲಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು.

ಜಿಲ್ಲಾಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಮಾಡಿದ ವೈದ್ಯರು ದಂಗಾಗಿ ಹೋಗಿದ್ದಾರೆ. ತಾಯಿಯ ಗರ್ಭದೊಳಗೆ ಮಗುವಿನ ಕತ್ತರಿಸಿದ ತಲೆ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತಲೆಯನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ತಾಯಿ ಪ್ರಸ್ತುತ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಆದರೆ, ಇಷ್ಟು ದೊಡ್ಡ ಅನಾಹುತ ನಡೆದರೂ ಜಿಲ್ಲಾಡಳಿತ ಮಾತ್ರ ಇನ್ನೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here