ಕಾರ್ಕಳ: ತಾಲ್ಲೂಕಿನ ನಿಟ್ಟೆ ಸಮೀಪದ ಬೋರ್ಗಲ್ಲುಗುಡ್ಡೆ ಎಂಬಲ್ಲಿ ಆವರಣವಿಲ್ಲದ ಬಾವಿಗೆ ಚಿರತೆಯೊಂದು ಬಿದ್ದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ. ಆಹಾರವನ್ನು ಅರಸಿ ಕಾಡಿನಿಂದ ಹೊರಬಂದಿದ್ದ ಚಿರತೆ ನಿಟ್ಟೆ ಬೋರ್ವೆಲ್ ಗುಡ್ಡೆ ಮನೆಯ ಬಳಿಯ ಬಾವಿಗೆ ಬಿದ್ದಿದೆ.
ಬೆಳಿಗ್ಗೆ ಬಾವಿಯೊಳಗೆ ಚಿರತೆಯನ್ನು ಕಂಡ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ರುತ್ರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಕಬ್ಬಿಣದ ಪಂಜರ ಹಾಗೂ ಕಬ್ಬಿಣದ ಹಗ್ಗಗಳ ಸಹಾಯದಿಂದ ಚಿರತೆಯನ್ನು ಮೇಲಕ್ಕೆತ್ತುವ ಕಾರ್ಯ ನಡೆಸಲಾಯಿತು.
ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಬೆಳ್ಮಣ್ ಉಪವಲಯ ಅರಣ್ಯಾಧಿಕಾರಿ ಹುಕ್ರಪ್ಪ, ಗಸ್ತು ಅರಣ್ಯಪಾಲಕ ಸುರೇಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಚಂದ್ರಕಾಂತ್, ಕರುಣಾಕರ್ ಸಹಿತ ಇತರರು ಸಹಕಾರ ನೀಡಿದರು. ರಕ್ಷಿಸಿದ ಚಿರತೆಯ ಆರೋಗ್ಯ ಪರಿಶೀಲಿಸಿ ಯಾವುದೇ ಗಾಯಗಳಿಲ್ಲವೆಂದು ದೃಢಪಟ್ಟ ನಂತರ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

