ಮೂಡುಬಿದಿರೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ, ಅರೆಬರೆ ಕಾಮಗಾರಿ, ಪರಿಶೀಲನಾ ಪ್ರಹಸನ

0
9

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕೊಡಂಗಲ್ಲು ಕೋಟೆ ಬಾಗಿಲನ್ನು ಸಂಪರ್ಕಿಸುವ ಕೆಳಗಿನ ಸಮಾಂತರ ರಸ್ತೆಯಲ್ಲಿ ಕೊಳಚೆ ನೀರು, ಹರಿದು ಹೋಗುತ್ತಿದೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಯನ್ನು ಉಪಯೋಗಿಸುತ್ತಿದ್ದು ಕೊಳಚೆ ನೀರಿನಲ್ಲಿಯೇ ನಡೆದಾಡುವ ಅನಿವಾರ್ಯತೆಯನ್ನು ಪುರಸಭೆಯು ನಿರ್ಮಿಸಿದೆ.

ಸೂಕ್ತವಾದಂತ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದಾಗಿ ಕೆಲವಾರು ಮನೆಗಳವರು ಬಿಡುವ ಕೊಳಚೆ, ನೀರು ಸಾರ್ವಜನಿಕ ಈ ಮಾರ್ಗದಲ್ಲಿ ಹರಿದು ಅತ್ಯಂತ ದುರ್ವಾಸನೆಯನ್ನು ಬೀರುತ್ತಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಈ ಬಗ್ಗೆ ದೂದು ನೀಡಿದರು ಪುರಸಭೆಯ ಅಧಿಕಾರಿಗಳು ಸ್ಥಳ ಪರಿಶೀಲನ ಪ್ರಹಸವನ್ನು ಗೈದು ಹಿಂತೆರಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕುಟುಂಬದವರು ಈ ಕೊಳಚೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು ಪುರಸಭೆ ಅವೈಜ್ಞಾನಿಕ ಅರೆಬರೆ ಕಳಪೆ ಕಾಮಗಾರಿಯನ್ನು ಕೆಲವಾರು ಲಕ್ಷಗಳಲ್ಲಿ ಮಾಡಿದ ನಾಟಕ ಮಾಡಿದೆ.

ಈಗಾಗಲೇ ಹಲವಾರು ಬಾರಿ ಪುರಸಭೆ, ಶಾಸಕರು, ಅಧಿಕಾರಿಗಳು, ಇತ್ಯಾದಿಯರನ್ನು ಸಂಪರ್ಕಿಸಿದರು ಕೂಡ ಯಾವುದೇ ಶಾಶ್ವತ ಪರಿಹಾರ ಲಭಿಸಿರುವುದಿಲ್ಲ ಎಂದು ನೊಂದುಕೊಂಡಿದ್ದಾರೆ. ಅರ್ಧ ತೆರೆದ ಒಳಚರಂಡಿಯಿಂದಾಗಿ ಸಂತ್ರಸ್ತರು ಸಮಸ್ಯೆಯನ್ನು ಎದುರಿಸುತ್ತಿದ್ದು ಇದೀಗ ಎಲ್ಲರೊಂದಾಗಿ ಪುರಸಭೆಯನ್ನು ಘೆರಾವು ಮಾಡುವ, ಮುತ್ತಿಗೆ ಹಾಕುವ, ಇತ್ಯಾದಿ ಕಠಿಣ ತರದ ಪ್ರತಿಭಟನೆಗೆ ಇಳಿಯಲು ಸಜ್ಜಾಗುತ್ತಿದ್ದಾರೆ ಎಂದು ಸ್ವತಹ ಸ್ಥಳೀಯರು ತಿಳಿಸಿದ್ದಾರೆ.
.