ಸೈಬರ್‌ ವಂಚನೆ ಕುರಿತು ಜಾಗೃತಿ ಉಪನ್ಯಾಸ

0
6

ಉಡುಪಿ: ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಹಾಗೂ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗೆ ಸೈಬರ್‌ ಸುರಕ್ಷತೆ ಹಾಗೂ ಆನ್‌ಲೈನ್‌ ವಂಚನೆ ಕುರಿತು ವಿಶೇಷ ಉಪನ್ಯಾಸ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್‌ ಕಾನ್‌ಸ್ಟೆಬಲ್‌ ಮಹದೇವ ಜಿ.ಆರ್., ಸೈಬರ್‌ ವಂಚಕರು ಅನುಸರಿಸುವ ವಿಧಾನಗಳ ಕುರಿತು ವಿವರಿಸಿದರು. ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸಿದ ಬಳಿಕ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳ ಹೆಸರಿನಲ್ಲಿ ಸಂದೇಶಗಳು ಅಥವಾ ಲಿಂಕ್‌ಗಳು ಬರುತ್ತವೆ. ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಕ್ಲಿಕ್‌ ಮಾಡಿದಾಗ ವಂಚಕರು ವೈಯಕ್ತಿಕ ಹಾಗೂ ಹಣಕಾಸು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಕೆಲ ಸಂದರ್ಭಗಳಲ್ಲಿ ಒಟಿಪಿಯನ್ನೂ ಪಡೆದು ವಂಚನೆ ಎಸಗುತ್ತಾರೆ ಎಂದು ತಿಳಿಸಿದರು.

ಇತ್ತೀಚೆಗೆ ಉಡುಪಿಯ ಎಂಬಿಬಿಎಸ್‌ ವೈದ್ಯರೊಬ್ಬರು ₹1.20 ಕೋಟಿ ವಂಚನೆಗೆ ಒಳಗಾದ ಪ್ರಕರಣವನ್ನು ಅವರು ಉಲ್ಲೇಖಿಸಿದರು. ಪ್ರಕರಣದ ಆರೋಪಿಯನ್ನು ದಕ್ಷಿಣ ಕೊರಿಯಾದಲ್ಲಿ ಪತ್ತೆಹಚ್ಚಲಾಗಿದ್ದು, ಜನರನ್ನು ವಂಚಿಸಲು ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌ (ವಿಪಿಎನ್‌) ಬಳಸಲಾಗಿತ್ತು ಎಂದು ಹೇಳಿದರು.

ಆನ್‌ಲೈನ್‌ ‘ಪಾಮಿಸ್ಟ್ರಿ’ (ಹಸ್ತಸಾಮುದ್ರಿಕ) ಆ್ಯಪ್‌ಗಳ ಬಳಕೆಯ ಬಗ್ಗೆಯೂ ಎಚ್ಚರಿಕೆ ನೀಡಿದ ಅವರು, ಇಂತಹ ಆ್ಯಪ್‌ಗಳ ಮೂಲಕ ಬೆರಳಚ್ಚು ಸೇರಿದಂತೆ ಸೂಕ್ಷ್ಮ ಬಯೋಮೆಟ್ರಿಕ್‌ ಮಾಹಿತಿಯು ಆನ್‌ಲೈನ್‌ನಲ್ಲಿ ಸೋರಿಕೆಯಾಗುವ ಸಾಧ್ಯತೆ ಇದೆ ಎಂದರು.

ಇ-ಮೇಲ್‌ ಪಾಸ್‌ವರ್ಡ್‌ಗಳನ್ನು ಆಗಾಗ ಬದಲಾಯಿಸುವುದು ಸೈಬರ್‌ ವಂಚನೆಯನ್ನು ತಡೆಯುವ ಒಂದು ಕ್ರಮವಾಗಿದೆ. ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಲು ಬಳಸುವ ಇ-ಮೇಲ್‌ ಖಾತೆ ಹ್ಯಾಕ್‌ ಆದರೆ ಅದರ ಮೂಲಕ ವೈಯಕ್ತಿಕ ಮಾಹಿತಿಯನ್ನು ವಂಚಕರು ಪಡೆಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ಅಪರಿಚಿತ ಲಿಂಕ್‌ಗಳು ಹಾಗೂ ಕೊಡುಗೆಗಳ ಸಂದೇಶಗಳನ್ನು ಪರಿಶೀಲಿಸದೆ ಕ್ಲಿಕ್‌ ಮಾಡಬಾರದು. ಒಟಿಪಿ, ಪಾಸ್‌ವರ್ಡ್‌ ಸೇರಿದಂತೆ ಯಾವುದೇ ಗೌಪ್ಯ ಮಾಹಿತಿಯನ್ನು ಅಪರಿಚಿತರಿಗೆ ನೀಡಬಾರದು. ಸೈಬರ್‌ ವಂಚನೆಗೆ ಒಳಗಾದವರು ಕೂಡಲೇ 1930 ಸೈಬರ್‌ ಕ್ರೈಂ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿಖೇತನ ಮಾತನಾಡಿ, ಡಿಜಿಟಲ್‌ ಯುಗದಲ್ಲಿ ವಿದ್ಯಾರ್ಥಿನಿಯರು ಹೆಚ್ಚು ಜಾಗರೂಕರಾಗಿರಬೇಕು. ತಾವು ಜಾಗೃತರಾಗುವುದರ ಜೊತೆಗೆ ಸೈಬರ್‌ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿಯೂ ಅರಿವು ಮೂಡಿಸಬೇಕು ಎಂದರು.

ಎಎಸ್‌ಐ ದಿನೇಶ್‌, ಪೊಲೀಸ್‌ ಕಾನ್‌ಸ್ಟೆಬಲ್‌ ಮಹಾಲಕ್ಷ್ಮಿ, ಎಂ.ಕಾಂ ಸಂಯೋಜಕ ಡಾ. ಅಬ್ದುಲ್‌ ರಜಾಕ್‌ ಹಾಗೂ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ರಾಕೇಶ್‌ ಉಪಸ್ಥಿತರಿದ್ದರು.

ಕೃತಿಕಾ ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ. ಸಫಿಯಾ ಸ್ವಾಗತಿಸಿದರು. ಶ್ರಾವಣಿ ವಂದಿಸಿದರು.