ಬಂಟ್ವಾಳ : ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಇದರ ವತಿಯಿಂದ ಇದೇ ಪ್ರಥಮ ಬಾರಿಗೆ ಅ.17ರಿಂದ ಪ್ರತೀ ‘ಶನಿವಾರ ವಾರದ ಸಂತೆ’ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಆರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪ್ರತೀ ಶನಿವಾರ ಬೆಳಿಗ್ಗೆ ಗಂಟೆ 9 ರಿಂದ ಸಂಜೆ ಗಂಟೆ 8ರ ತನಕ ‘ವಾರದ ಸಂತೆ’ ನಡೆಸುವ ಮೂಲಕ ತಾಲ್ಲೂಕಿನ ಕೃಷಿಕರಿಗೆ ಸೂಕ್ತ ಮಾರುಕಟ್ಟೆ ಒದಗಿಸುವುವದರ ಜೊತೆಗೆ ಗ್ರಾಹಕರ ಸಮಾಗಮವೂ ಆಗಲಿದೆ’ ಎಂದರು. ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದರ ಜತೆಗೆ ಸ್ಥಳೀಯ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಹಕಾರಿ ಸಂಘದ ವಿನೂತನ ಪ್ರಯತ್ನವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ‘ಶನಿವಾರ ಸಂತೆ’ ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈಗಾಗಲೇ ಸುಮಾರು 19 ಮಾರಾಟ ಮಳಿಗೆ ಹೆಸರು ನೋಂದಾಯಿಸಿಕೊAಡಿದ್ದು, 30ಕ್ಕೂ ಹೆಚ್ಚು ಮಾರಾಟ ಮಳಿಗೆ ತೆರೆಯುವ ನಿರೀಕ್ಷೆ ಇದೆ ಎಂದರು. ಸ್ಥಳೀಯರಿಗೆ ಹೆಚ್ಚಿನ ಅದ್ಯತೆ ನೀಡಲಾಗಿದ್ದು, ಹೊರಜಿಲ್ಲೆಯ ಕೃಷಿಕರಿಗೂ ಸೂಕ್ತ ಸ್ಥಳಾವಕಾಶ ಮತ್ತು ವಾಹನ ನಿಲುಗಡೆಗೆ ಅವಕಾಶ ಇದೆ ಎಂದರು.
ಆಮಂತ್ರಣ ಪತ್ರ ಬಿಡುಗಡೆ
ಇದೇ ವೇಳೆ ಜಮೀನಿನ ಮಾಲೀಕ ಮೋಹನ್ ಸಾಲಿಯಾನ್ ಮತ್ತು ಶ್ಯಾಮಲಾ ಮೋಹನ್ ಸಾಲಿಯಾನ್ ದಂಪತಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ್ ರೈ, ನಿರ್ದೇಶಕರಾದ ಬಿ.ಗಜೇಂದ್ರ ಪ್ರಭು, ರವೀಂದ್ರ, ವಿಜಯ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಬಟ್ಯಪ್ಪ ಶೆಟ್ಟಿ, ಲೋಕೇಶ್ ಸುವರ್ಣ, ಸ್ವಷ್ನ ರಾಜರತ್ನ, ಸಿಇಒ ಅಜಿತ್ ಕುಮಾರ್ ಜೈನ್, ಶಾಖಾಧಿಕಾರಿ ಶೈಲೇಶ್ ಇದ್ದರು.

