ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿಯಲ್ಲಿ ಜೂನ್ 29ರಂದು ನಡೆದಿದ್ದ ಜ್ಯುವೆಲ್ಲರಿ ಉದ್ಯಮಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಕೇರಳದ ಕಣ್ಣೂರು ಮೂಲದ ಶ್ರೀರಾಗ್ ಹಾಗೂ ಮಿಥುನ್ ಲಾಲ್, ಮಡಿಕೇರಿ ಮೂಲದ ಉಬೇದ್ ಮತ್ತು ಜಿಯಾದ್ ಎಂದು ಗುರುತಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ಕೇರಳದ ನಿಮಿಲ್ ಹಾಗೂ ಕೊಡಗು ಮೂಲದ ಇರ್ಶಾದ್ ಮತ್ತು ಮುಸ್ತಾಫ ಅವರನ್ನು ಬಂಧಿಸಿದ್ದರು. ಇದೀಗ ಮತ್ತೆ ನಾಲ್ವರು ಆರೋಪಿಗಳ ಬಂಧನದೊಂದಿಗೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ವಾಹನ, ಚಿನ್ನದ ಉಂಗುರ, ಕಬ್ಬಿಣದ ರಾಡ್ ವಶ
ಶ್ರೀರಾಗ್‌ನ ಮನೆಗೆ ಪೊಲೀಸರು ದಾಳಿ ನಡೆಸಿ, ದರೋಡೆ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಇನೋವಾ ಮತ್ತು ಸ್ವಿಫ್ಟ್ ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ 10 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ ಜ್ಯುವೆಲ್ಲರಿ ಉದ್ಯಮಿಯ ಮೇಲೆ ಹಲ್ಲೆ ನಡೆಸಲು ಬಳಸಲಾಗಿದೆ ಎನ್ನಲಾದ ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಇನ್ನೂ ಹೆಚ್ಚಿನ ವ್ಯಕ್ತಿಗಳ ಪಾತ್ರವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದರೋಡೆಗೆ ಬಳಸಲಾದ ವಾಹನಗಳು, ಹಲ್ಲೆಗೆ ಬಳಸಿದ ಆಯುಧ ಹಾಗೂ ವಶಪಡಿಸಿಕೊಂಡಿರುವ ವಸ್ತುಗಳ ಕುರಿತು ತನಿಖೆ ಮುಂದುವರಿದಿದೆ.
ಪಣಂಬೂರು ಪೊಲೀಸರು ಪ್ರಕರಣದ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದು, ಬಂಧಿತ ಆರೋಪಿಗಳ ವಿಚಾರಣೆಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ.

