ರಸ್ತೆ ಸುರಕ್ಷತೆ ಮತ್ತು ಅಪಘಾತ ಸಂತ್ರಸ್ತರ ನೆರವಿಗೆ ಬಜಾಜ್ ಜನರಲ್ ಇನ್ಶೂರೆನ್ಸ್ ಅಭಿಯಾನ

0
6

ಪುಣೆ : ರಸ್ತೆ ಸುರಕ್ಷತೆ, ವಾಹನ ವಿಮೆ ಹಾಗೂ ರಸ್ತೆ ಅಪಘಾತ ಸಂತ್ರಸ್ತರಿಗೆ ದೊರೆಯುವ ಸರ್ಕಾರಿ ನೆರವು ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಜಾಜ್ ಜನರಲ್ ಇನ್ಶೂರೆನ್ಸ್ ಸಂಸ್ಥೆಯು ಪುಣೆ ಸಂಚಾರ ಪೊಲೀಸರೊಂದಿಗೆ ಕೈಜೋಡಿಸಿದೆ.

ಈ ಅಭಿಯಾನದ ಭಾಗವಾಗಿ ಪುಣೆಯ ಯರವಾಡದಲ್ಲಿರುವ ಬಜಾಜ್ ಜನರಲ್ ಮೆಟ್ರೋ ನಿಲ್ದಾಣದಲ್ಲಿ ಡಿಜಿಟಲ್ ಶಾಖೆಯನ್ನು ಆರಂಭಿಸಲಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಈ ನಿಲ್ದಾಣದಲ್ಲಿ ವಾಹನ ಮಾಲೀಕರಿಗೆ ಥರ್ಡ್ ಪಾರ್ಟಿ (TP) ವಿಮೆಯ ಮಹತ್ವದ ಕುರಿತು ಮಾಹಿತಿ ನೀಡಲಾಗುತ್ತಿದೆ.

ಡಿಜಿಟಲ್ ಶಾಖೆಯಲ್ಲಿ ಅಳವಡಿಸಿರುವ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ವಾಹನ ಮಾಲೀಕರು ತಮ್ಮ ವಾಹನದ ಥರ್ಡ್ ಪಾರ್ಟಿ ವಿಮೆಯ ಮಾನ್ಯತೆಯನ್ನು ಪರಿಶೀಲಿಸಬಹುದು. ವಿಮೆ ಅವಧಿ ಮುಗಿದಿದ್ದರೆ ಡಿಜಿಟಲ್ ಮೂಲಕವೇ ಕೆಲವೇ ನಿಮಿಷಗಳಲ್ಲಿ ಹೊಸ ವಿಮೆಯನ್ನು ಖರೀದಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ಥರ್ಡ್ ಪಾರ್ಟಿ ವಾಹನ ವಿಮೆ ಕಡ್ಡಾಯವಾಗಿದೆ. ರಸ್ತೆ ಅಪಘಾತಗಳಿಂದ ಇತರರಿಗೆ ಉಂಟಾಗುವ ಹಾನಿ ಹಾಗೂ ಆರ್ಥಿಕ ಹೊಣೆಗಾರಿಕೆಗಳಿಂದ ರಕ್ಷಣೆ ಒದಗಿಸುವಲ್ಲಿ ಈ ವಿಮೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೂ ಅನೇಕ ವಾಹನಗಳು ಮಾನ್ಯ ವಿಮೆ ಇಲ್ಲದೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ.

PM-RAHAT ಮತ್ತು RAH-VEER ಯೋಜನೆಗಳ ಕುರಿತು ಜಾಗೃತಿ

ಕೇಂದ್ರ ಸರ್ಕಾರದ ಎರಡು ಪ್ರಮುಖ ರಸ್ತೆ ಅಪಘಾತ ನೆರವು ಯೋಜನೆಗಳ ಬಗ್ಗೆಯೂ ಈ ಅಭಿಯಾನದ ಮೂಲಕ ಮಾಹಿತಿ ನೀಡಲಾಗುತ್ತಿದೆ.

RAH-VEER ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಗೋಲ್ಡನ್ ಅವರ್ ಅವಧಿಯಲ್ಲಿ ಆಸ್ಪತ್ರೆಗೆ ತಲುಪಿಸಲು ನೆರವಾಗುವ ಸದುದ್ದೇಶದ ನಾಗರಿಕರನ್ನು ಗುರುತಿಸಿ ಗೌರವಿಸುವ ಹಾಗೂ ಬಹುಮಾನ ನೀಡುವ ವ್ಯವಸ್ಥೆಯಿದೆ.

ಇನ್ನೊಂದೆಡೆ, ಪ್ರಧಾನಮಂತ್ರಿ ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಮತ್ತು ಖಚಿತ ಚಿಕಿತ್ಸಾ ಯೋಜನೆಯಾದ PM-RAHAT ಅಡಿಯಲ್ಲಿ ಅರ್ಹ ಅಪಘಾತ ಸಂತ್ರಸ್ತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಒದಗಿಸಲಾಗುತ್ತದೆ.

ಬಜಾಜ್ ಜನರಲ್ ಇನ್ಶೂರೆನ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಡಾ. ತಪನ್ ಸಿಂಘೆಲ್ ಮಾತನಾಡಿ, ರಸ್ತೆ ಅಪಘಾತವು ಕೇವಲ ಒಂದು ಘಟನೆ ಮಾತ್ರವಲ್ಲ, ಅದು ಕುಟುಂಬವೊಂದರ ಬದುಕಿನ ಮೇಲೆಯೇ ಪರಿಣಾಮ ಬೀರುತ್ತದೆ. ಅಪಘಾತ ಸಂತ್ರಸ್ತರಿಗೆ ನೆರವು, ವಿಮೆ ಹಾಗೂ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ. ಬಜಾಜ್ ಸಮೂಹದ 100ನೇ ವರ್ಷ ಹಾಗೂ ಬಜಾಜ್ ಜನರಲ್ ಇನ್ಶೂರೆನ್ಸ್‌ನ 25ನೇ ವರ್ಷದ ಸಂದರ್ಭದಲ್ಲಿ ಪುಣೆ ನಗರಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಉದ್ದೇಶದಿಂದ ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪುಣೆ ನಗರ ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತ ಡಾ. ಸಂದೀಪ್ ಭಜಿಭಾಕ್ರೆ ಮಾತನಾಡಿ, ರಸ್ತೆ ಸುರಕ್ಷತೆ ಎಲ್ಲರ ಜವಾಬ್ದಾರಿಯಾಗಿದೆ. ಪೊಲೀಸರು ಮಾತ್ರ ರಸ್ತೆಗಳನ್ನು ಸುರಕ್ಷಿತಗೊಳಿಸಲು ಸಾಧ್ಯವಿಲ್ಲ. ಸಾರ್ವಜನಿಕರು, ಸಂಸ್ಥೆಗಳು ಹಾಗೂ ಉದ್ಯಮ ವಲಯವೂ ಇದರಲ್ಲಿ ಕೈಜೋಡಿಸಬೇಕು. ಅಪಘಾತ ಸಂತ್ರಸ್ತರಿಗೆ ನೆರವಾಗುವವರಿಗೆ RAH-VEER ಯೋಜನೆಯಡಿ ಪ್ರೋತ್ಸಾಹ ನೀಡಲಾಗುತ್ತದೆ ಹಾಗೂ PM-RAHAT ಯೋಜನೆಯಡಿ ಅರ್ಹರಿಗೆ ನಗದುರಹಿತ ಚಿಕಿತ್ಸೆ ದೊರೆಯುತ್ತದೆ. ಪ್ರತಿಯೊಬ್ಬರೂ ವಾಹನ ವಿಮೆ ಹೊಂದುವುದರೊಂದಿಗೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಅಪಘಾತ ಸಂತ್ರಸ್ತರಿಗೆ ನೆರವಾಗಲು ಮುಂದೆ ಬರಬೇಕು ಎಂದು ಕರೆ ನೀಡಿದರು.

ಯರವಾಡ ಮೆಟ್ರೋ ನಿಲ್ದಾಣದಲ್ಲಿ ಆರಂಭಿಸಿರುವ ಡಿಜಿಟಲ್ ಶಾಖೆಯು ಸಾರ್ವಜನಿಕ ಜಾಗೃತಿ ಮತ್ತು ಡಿಜಿಟಲ್ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಪ್ರಯತ್ನವಾಗಿದೆ.

ಬಜಾಜ್ ಜನರಲ್ ಇನ್ಶೂರೆನ್ಸ್ ಕುರಿತು

2001ರಲ್ಲಿ ಸ್ಥಾಪನೆಯಾದ ಬಜಾಜ್ ಜನರಲ್ ಇನ್ಶೂರೆನ್ಸ್ ಸಂಸ್ಥೆಯು ಭಾರತದ ಪ್ರಮುಖ ಖಾಸಗಿ ಸಾಮಾನ್ಯ ವಿಮಾ ಸಂಸ್ಥೆಗಳಲ್ಲಿ ಒಂದಾಗಿದೆ. ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಈ ಸಂಸ್ಥೆಯು ವಾಹನ, ಆರೋಗ್ಯ, ಗೃಹ, ಪ್ರಯಾಣ, ಸೈಬರ್ ಸೇರಿದಂತೆ ವಿವಿಧ ವಿಮಾ ಸೇವೆಗಳನ್ನು ಒದಗಿಸುತ್ತಿದೆ. ದೇಶದ ಸುಮಾರು 1,500 ಪಟ್ಟಣಗಳು ಮತ್ತು ನಗರಗಳಲ್ಲಿ ತನ್ನ ಸೇವಾ ಜಾಲವನ್ನು ವಿಸ್ತರಿಸಿಕೊಂಡಿದೆ. ಸಂಸ್ಥೆಯು ICRA ಸಂಸ್ಥೆಯಿಂದ [ICRA]AAA ಕ್ರೆಡಿಟ್ ರೇಟಿಂಗ್ ಹೊಂದಿದೆ.