ಉಡುಪಿ ಯುಸಿಸಿಐ ವತಿಯಿಂದ ಮಾಹಿತಿ ಕಾರ್ಯಾಗಾರ: ಲೆಕ್ಕಪರಿಶೋಧನೆ ಮತ್ತು ಟ್ಯಾಲಿ ಬಳಕೆ ಕುರಿತು ಮಾಹಿತಿ

0
7

ಉಡುಪಿ: ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (UCCI) ವತಿಯಿಂದ ನವೆಂಬರ್ 11ರಂದು ಮಣಿಪಾಲ್ ವ್ಯಾಲ್ಯೂ ಕಂಟ್ರಿ ಕ್ಲಬ್‌ನಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಲೆಕ್ಕ ಪರಿಶೋಧಕರ ಸಂಘದ ಮಾಜಿ ಅಧ್ಯಕ್ಷ ಸಿಎ ಗಣೇಶ್ ವೈ. ಅವರು ಕಂಪನಿಗಳ ವ್ಯಾಪಾರ ವಹಿವಾಟಿನಲ್ಲಿ ಲೆಕ್ಕ ಪರಿಶೋಧಕರ ಪಾತ್ರ, ಮಾಲೀಕರು ಹಾಗೂ ಅಧಿಕಾರಿಗಳ ಜವಾಬ್ದಾರಿಗಳು ಮತ್ತು ಲೆಕ್ಕಪತ್ರಗಳ ನಿರ್ವಹಣೆ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಸಾಫ್ಟ್‌ಲಿಂಕ್ ಸಂಸ್ಥೆಯ ವತಿಯಿಂದ ಗಣೇಶ್ ತಲಪಾಡಿ ಹಾಗೂ ಫ್ರಾಂಕ್ಲಿನ್ ಅವರು ಟ್ಯಾಲಿ ಸಾಫ್ಟ್‌ವೇರ್ ಬಳಕೆ ಮತ್ತು ಅದರ ಉಪಯುಕ್ತತೆ ಕುರಿತು ವಿಶೇಷ ಮಾಹಿತಿ ನೀಡಿದರು. ಸದಸ್ಯರೊಂದಿಗೆ ಸಂವಾದ ನಡೆಸಿ, ಟ್ಯಾಲಿ ಬಳಕೆಯ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.

ಯುಸಿಸಿಐನ ನೂತನ ನಾಯಕತ್ವದ ಅಡಿಯಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ ಮಾಸಿಕ ಮ್ಯಾಗಜಿನ್ ಅನ್ನು ಅಧ್ಯಕ್ಷ ನಟರಾಜ್ ಪ್ರಭು ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಸದಸ್ಯರ ನಡುವಿನ ಒಗ್ಗಟ್ಟು, ಪರಸ್ಪರ ಸಹಕಾರ ಹಾಗೂ ಚೇಂಬರ್ ಮೂಲಕ ವ್ಯಾಪಾರಾವಕಾಶಗಳನ್ನು ಉತ್ತೇಜಿಸುವ ಕುರಿತು ವಿಚಾರ ವಿನಿಮಯ ನಡೆಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಡಾ. ವಿಜಯೇಂದ್ರ ರಾವ್, ಗೌರವ ಕಾರ್ಯದರ್ಶಿ ಮೊಹಮ್ಮದ್ ಸಮೀರ್, ಖಜಾಂಚಿ ಕೆ. ವಿನೋದ್ ಪೈ ಹಾಗೂ ಮ್ಯಾಗಜಿನ್ ಸಂಪಾದಕ ಡಾ. ವಿಲಾಸ್ ಪೈ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜಂಟಿ ಕಾರ್ಯದರ್ಶಿಗಳಾದ ಅವಿನಾಶ್ ಪೂಜಾರಿ ಮತ್ತು ಅನೀಶ್ ಪೈ ನಿರ್ವಹಿಸಿದರು. ಯುಸಿಸಿಐ ನಿರ್ದೇಶಕರಾದ ನಾಗರಾಜ್ ಹೆಬ್ಬಾರ್, ಅತುಲ್ ಭಕ್ತ, ಶ್ರೀಪತಿ ಭಟ್ ಹಾಗೂ ಸಂತೋಷ್ ಶೆಟ್ಟಿ ಸಹಕರಿಸಿದರು. ಸಂಸ್ಥೆಯ ಪದಾಧಿಕಾರಿಗಳು ಹಾಗೂ ನೂರಾರು ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.