ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಭರ್ಜರಿ ಜಯ ;ನೀರವ್ ಮೋದಿಗೆ ₹100 ಕೋಟಿ ಪಾವತಿ ಆದೇಶ..!

0
78

ಲಂಡನ್ : ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ ಹಾಗೂ ವಜ್ರ ವ್ಯಾಪಾರಿ Nirav Modi ಅವರಿಗೆ ಲಂಡನ್ ನ್ಯಾಯಾಲಯದಿಂದ ಭಾರೀ ಹಿನ್ನಡೆಯಾಗಿದೆ. ಬ್ಯಾಂಕ್ ಆಫ್ ಇಂಡಿಯಾ ದಾಖಲಿಸಿದ್ದ ಸಾಲ ವಸೂಲಾತಿ ಪ್ರಕರಣದಲ್ಲಿ ಬ್ಯಾಂಕ್ ಪರವಾಗಿ ತೀರ್ಪು ನೀಡಿರುವ ನ್ಯಾಯಾಲಯ, ನೀರವ್ ಮೋದಿ ಅವರು 10.7 ಮಿಲಿಯನ್ ಡಾಲರ್‌ (₹100 ಕೋಟಿಗೂ ಅಧಿಕ) ಮೊತ್ತವನ್ನು ಬ್ಯಾಂಕ್‌ಗೆ ಮರುಪಾವತಿಸಬೇಕು ಎಂದು ಆದೇಶಿಸಿದೆ.

ಪ್ರಕರಣದ ವಿಚಾರಣೆ ವೇಳೆ ಬ್ಯಾಂಕ್ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ತನಗೆ ಯಾವುದೇ ಸರಿಯಾದ ನೋಟಿಸ್ ನೀಡಲಾಗಿಲ್ಲ ಎಂದು ನೀರವ್ ಮೋದಿ ವಾದಿಸಿದ್ದರು. ಆದರೆ 2018ರ ಫೆಬ್ರವರಿ 17ರಂದು ತಾವೇ ಬ್ಯಾಂಕ್‌ಗೆ ಕಳುಹಿಸಿದ್ದ ಇ-ಮೇಲ್ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿತು.

ಆ ಇ-ಮೇಲ್‌ನಲ್ಲಿ ಪಿಎನ್‌ಬಿ ಹಗರಣ ಬಹಿರಂಗವಾದ ಬಳಿಕ ಮಾಧ್ಯಮಗಳ ಒತ್ತಡ ಮತ್ತು ತನಿಖಾ ಸಂಸ್ಥೆಗಳ ಕ್ರಮಗಳಿಂದ ತನ್ನ ಫೈರ್‌ಸ್ಟಾರ್ ಕಂಪನಿಗಳ ವ್ಯವಹಾರ ಸಂಪೂರ್ಣವಾಗಿ ಕುಸಿದಿದ್ದು, ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ನೀರವ್ ಮೋದಿ ಸ್ವತಃ ಉಲ್ಲೇಖಿಸಿದ್ದರು. ಇದರಿಂದ ಪರಿಸ್ಥಿತಿಯ ಬಗ್ಗೆ ಅವರಿಗೆ ಸಂಪೂರ್ಣ ಅರಿವು ಇತ್ತು ಎಂಬುದು ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2012ರಲ್ಲಿ ಬ್ಯಾಂಕ್ ಆಫ್ ಇಂಡಿಯಾ, ಫೈರ್‌ಸ್ಟಾರ್ ಗ್ರೂಪ್‌ನ ದುಬೈ ಮೂಲದ ಕಂಪನಿಗೆ ಸಾಲ ನೀಡಿತ್ತು. 2013ರಲ್ಲಿ ಕಂಪನಿ ಸಾಲ ಮರುಪಾವತಿಸಲು ವಿಫಲವಾದರೆ ವೈಯಕ್ತಿಕ ಆಸ್ತಿಯಿಂದ ಹಣ ಪಾವತಿಸುವುದಾಗಿ ನೀರವ್ ಮೋದಿ ವೈಯಕ್ತಿಕ ಖಾತರಿ ಪತ್ರಕ್ಕೆ ಸಹಿ ಹಾಕಿದ್ದರು. 2018ರಲ್ಲಿ ಹಗರಣ ಬೆಳಕಿಗೆ ಬಂದ ಬಳಿಕ ಬ್ಯಾಂಕ್ ತನ್ನ ಬಾಕಿ ಹಣ ವಸೂಲಿಗೆ ಮುಂದಾಗಿತ್ತು.

ಪ್ರಸ್ತುತ ಲಂಡನ್ ಜೈಲಿನಲ್ಲಿರುವ ನೀರವ್ ಮೋದಿ, ಭಾರತಕ್ಕೆ ಹಸ್ತಾಂತರವನ್ನು ತಡೆಯಲು ವಿವಿಧ ಕಾನೂನು ತಂತ್ರಗಳನ್ನು ಬಳಸಿದ್ದರೂ, ನ್ಯಾಯಾಲಯ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಬ್ಯಾಂಕ್ ಕಳುಹಿಸಿದ್ದ ನೋಟಿಸ್‌ಗಳು ತನಗೆ ತಲುಪಿಲ್ಲ ಎಂಬ ವಾದವನ್ನೂ ನ್ಯಾಯಾಲಯ ಒಪ್ಪಲಿಲ್ಲ.

ನ್ಯಾಯಮೂರ್ತಿ ಸೈಮನ್ ಟಿಂಕ್ಲರ್ ಅವರು ನೀಡಿದ ಅಂತಿಮ ಆದೇಶದಲ್ಲಿ, ನೀರವ್ ಮೋದಿ ಅವರು ಅಸಲು 4.1 ಮಿಲಿಯನ್ ಡಾಲರ್‌ (ಸುಮಾರು ₹38.9 ಕೋಟಿ) ಹಾಗೂ ಅದರ ಮೇಲಿನ ಬಡ್ಡಿ ಸೇರಿ ಒಟ್ಟು ₹100 ಕೋಟಿಗೂ ಅಧಿಕ ಮೊತ್ತವನ್ನು ತಕ್ಷಣವೇ ಬ್ಯಾಂಕ್‌ಗೆ ಪಾವತಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ.

ಈ ತೀರ್ಪು, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳ ವಿರುದ್ಧ ಭಾರತೀಯ ಬ್ಯಾಂಕ್‌ಗಳಿಗೆ ಮಹತ್ವದ ಕಾನೂನು ಜಯವೆಂದು ಪರಿಗಣಿಸಲಾಗಿದೆ.

LEAVE A REPLY

Please enter your comment!
Please enter your name here