ಬ್ಯಾಂಕ್ ಮುಷ್ಕರಕ್ಕೆ ಬ್ರೇಕ್ : ಇಂದಿನಿಂದ ಎಂದಿನಂತೆ ಸೇವೆ

0
33

ಬೆಂಗಳೂರು: ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ದೇಶಾದ್ಯಂತ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರವನ್ನು ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್‌ (UFBU) ಸೆಪ್ಟೆಂಬರ್ 27ರ ತಡರಾತ್ರಿ ಈ ಕುರಿತು ಪ್ರಕಟಣೆ ನೀಡಿದೆ. ಹೀಗಾಗಿ ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಸೆಪ್ಟೆಂಬರ್ 27ರ ರಾತ್ರಿ ಸುಮಾರು 9.30ಕ್ಕೆ ಭಾರತೀಯ ಬ್ಯಾಂಕುಗಳ ಸಂಘ (IBA) ಹಾಗೂ UFBU ನಡುವೆ ನಡೆದ ಸಭೆಯಲ್ಲಿ ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಚರ್ಚೆ ನಡೆಯಿತು. ವಿಶೇಷವಾಗಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುವ ಬೇಡಿಕೆ ಕುರಿತು ಚರ್ಚಿಸಿ, ಈ ವಿಚಾರವನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲು IBA ಒಪ್ಪಿಗೆ ನೀಡಿದೆ. ಸಮಿತಿಯಲ್ಲಿ IBA ಹಾಗೂ ಬ್ಯಾಂಕ್ ಯೂನಿಯನ್‌ಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಸಂಬಂಧಿತ ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮದ ಕುರಿತು ಚರ್ಚೆ ನಡೆಯಲಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸೆ.28ರಿಂದ 30ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ರಾಷ್ಟ್ರವ್ಯಾಪಿ ಮೂರು ದಿನಗಳ ಮುಷ್ಕರವನ್ನು UFBU ಮುಂದೂಡಿದೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಉಂಟಾಗಬಹುದಾಗಿದ್ದ ಶಾಖಾ ಸೇವೆಗಳ ವ್ಯತ್ಯಯ ತಪ್ಪಿದಂತಾಗಿದೆ.

ಬ್ಯಾಂಕ್ ಒಕ್ಕೂಟಗಳ ಪ್ರಮುಖ ಬೇಡಿಕೆಗಳಲ್ಲಿ ಎಲ್ಲಾ ಶನಿವಾರಗಳಿಗೂ ರಜೆ ನೀಡುವ ಮೂಲಕ ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೆ ತರುವುದು ಪ್ರಮುಖವಾಗಿದೆ. ಇದರೊಂದಿಗೆ ಪಿಂಚಣಿ ಸೇರಿದಂತೆ ಇತರ ಸೇವಾ ಸಂಬಂಧಿತ ಬೇಡಿಕೆಗಳನ್ನೂ ಯೂನಿಯನ್‌ಗಳು ಮುಂದಿಟ್ಟಿದ್ದವು.

ಹೀಗಾಗಿ ಇಂದಿನಿಂದ ಬ್ಯಾಂಕ್ ಶಾಖೆಗಳು ಸಾಮಾನ್ಯವಾಗಿ ತೆರೆದಿರಲಿದ್ದು, ಗ್ರಾಹಕರು ಎಂದಿನಂತೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ. ಖಾತೆ ನಿರ್ವಹಣೆ, ಹಣ ಠೇವಣಿ, ಹಣ ಹಿಂಪಡೆಯುವಿಕೆ ಸೇರಿದಂತೆ ಶಾಖೆಯಲ್ಲಿ ಲಭ್ಯವಿರುವ ಸಾಮಾನ್ಯ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.